ವಿಜಯನಗರ: ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ತನ್ನ ಹೆತ್ತ ತಂದೆ-ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿ, ಮನೆಯೊಳಗೆ ಹೂತು ಹಾಕಿರುವ ಅಮಾನುಷ ಕೃತ್ಯ ವಿಜಯನಗರ ಜಿಲ್ಲೆಯ ಕೋಟೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿ ಮೂಲದ ಅಕ್ಷಯಕುಮಾರ ಎಂಬಾತನೇ ಈ ಪೈಶಾಚಿಕ ಕೃತ್ಯ ಎಸಗಿದ ಆರೋಪಿ. ಈತ ತನ್ನ ತಂದೆ ಭೀಮರಾಜ, ತಾಯಿ ಜಯಲಕ್ಷ್ಮಿ ಮತ್ತು ತಂಗಿ ಅಮೃತಾ ಎಂಬುವವರನ್ನು ಜನವರಿ 27 ರಂದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೋಟೂರಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಈ ಕುಟುಂಬ, ಟೈರ್ ರಿಟ್ರೇಡಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿತ್ತು.
ಪೊಲೀಸರ ಹಾದಿ ತಪ್ಪಿಸಲು ಯತ್ನ:
ಕೊಲೆ ಮಾಡಿದ ನಂತರ ಏನೂ ಅರಿಯದವನಂತೆ ಬೆಂಗಳೂರಿಗೆ ತೆರಳಿದ ಅಕ್ಷಯ, ಅಲ್ಲಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ತನ್ನ ತಂದೆ-ತಾಯಿ ಮತ್ತು ತಂಗಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಅಕ್ಷಯನ ನಡವಳಿಕೆಯ ಮೇಲೆ ಅನುಮಾನ ಬಂದಿದೆ. ಸತತ ವಿಚಾರಣೆಗೆ ಒಳಪಡಿಸಿದಾಗ, ತಾನೇ ಮೂವರನ್ನು ಕೊಲೆ ಮಾಡಿ ಮನೆಯೊಳಗೆ ಹೂತು ಹಾಕಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP)ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ, ತನಿಖೆ ಮುಂದುವರಿದಿದೆ.
ಮೊದಲಿಗೆ ಜಯಮ್ಮ ಶವ, ಬಳಿಕ ಅಮೃತಾ ಶವ ಮತ್ತು ಕೊನೆಯಲ್ಲಿ ಭೀಮರಾಜ್ ಶವ ಇಡಲಾಗಿತ್ತು. ಭೀಮರಾಜ್ ಶವವನ್ನು ಇಡಲಾಗದೇ, ತೊಡೆಯ ಭಾಗವನ್ನು ಕತ್ತರಿಸಿ ತುಂಬಿಸಲಾಗಿತ್ತು. ಜನವರಿ 27ರಂದು ಈ ಕೊಲೆ ನಡೆದಿರುವ ಸಾಧ್ಯತೆ ಇದೆ’ ಎಂದರು.
ಇಬ್ಬರ ಹೆಸರು: ‘ ತಂದೆ, ತಾಯಿ, ತಂಗಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿ ಮೊದಲಿಗೆ ದೂರು ನೀಡಿದ್ದ. ಆತನ ವರ್ತನೆಯಲ್ಲಿ ಸಂಶಯ ಬಂದ ಕಾರಣ ತಿಲಕ್ನಗರ ಪೊಲೀಸರು ವಿಚಾರಣೆ ನಡೆಸಿದ್ದರು. ತಿಲಕ್ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಎಫ್ಐಆರ್ನಲ್ಲಿ ಇಬ್ಬರ ಹೆಸರು ಉಲ್ಲೇಖ ಇದೆ’ ಎಂದು ತಿಳಿಸಿದರು.
ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಸಂಬಂಧಿಕರಿಗೆ ಒಪ್ಪಿಸಲಾಯಿತು. ಮತ್ತೊಂದೆಡೆ ಆರೋಪಿಯನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಬೆಂಗಳೂರಿಗೆ ಕರೆದೊಯ್ದರು.
ಹತ್ಯೆಗೆ ಹಣ ಕಾರಣ?
ಜಗಳೂರಿನಲ್ಲಿದ್ದ ಭೀಮರಾಜ್ ಅವರಿಗೆ ಸೇರಿದ ಆಸ್ತಿಯೊಂದನ್ನು ಈಚೆಗೆ ಮಾರಾಟ ಮಾಡಿದ್ದು, ₹1.50 ಕೋಟಿ ಹಣ ಬಂದಿತ್ತು. ಅದನ್ನು ನೀಡುವಂತೆ ಅಕ್ಷಯ್ ಕುಮಾರ್ ಕೇಳಿದ್ದ. ಆತ ದುಶ್ಚಟಗಳಿಗೆ ದಾಸನಾಗಿದ್ದರಿಂದ ಹಣ ಕೊಡಲು ಪೋಷಕರು ಒಪ್ಪಿರಲಿಲ್ಲ. ‘ಮಗಳ ಮದುವೆ, ನಮ್ಮ ಖರ್ಚಿಗೆ ಬೇಕು’ ಎಂದು ತಮ್ಮಲ್ಲೇ ಇಟ್ಟುಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದು, ಇನ್ನೊಬ್ಬರ ನೆರವು ಪಡೆದು ಕೊಲೆ ನಡೆಸಿರಬೇಕು’ ಎಂದು ಪೊಲೀಸ್ ಮೂಲಗಳು ಹೇಳಿವೆ.


