ಪಾಟ್ನಾ : ಬಿಹಾರದಲ್ಲಿ ‘ಜೀವಿತ್ ಪುತ್ರಿಕಾ’ ಹಬ್ಬದ ಸಂದರ್ಭದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ನದಿಗಳು ಮತ್ತು ಕೊಳಗಳಲ್ಲಿ ಪವಿತ್ರ ಸ್ನಾನ ಮಾಡುವಾಗ 37 ಮಕ್ಕಳು ಸೇರಿದಂತೆ ಕನಿಷ್ಠ 43 ಜನರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಹಾಗೂ ಮೂವರು ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.
ಬುಧವಾರ ನಡೆದ ಉತ್ಸವದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ಘಟನೆಗಳು ಸಂಭವಿಸಿವೆ. ‘ಜೀವಿತ್ ಪುತ್ರಿಕಾ’ ಹಬ್ಬದ ಸಮಯದಲ್ಲಿ, ಮಹಿಳೆಯರು ತಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಉಪವಾಸ ಮಾಡುತ್ತಾರೆ ಮತ್ತು ಇಬ್ಬರೂ ಪವಿತ್ರ ಸ್ನಾನ ಮಾಡುತ್ತಾರೆ.
ಈವರೆಗೆ ಒಟ್ಟು 43 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ (ಡಿಎಂಡಿ) ಹೊರಡಿಸಿದ ಹೇಳಿಕೆ ತಿಳಿಸಿದೆ.
ಮುಖ್ಯಮಂತ್ರಿ ನಿತೀಶಕುಮಾರ ಅವರು ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಎಕ್ಸ್ಗ್ರೇಷಿಯಾವನ್ನು ಒದಗಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ ಮತ್ತು ಎಂಟು ಮೃತರ ಕುಟುಂಬ ಸದಸ್ಯರು ಈಗಾಗಲೇ ಅದನ್ನು ಸ್ವೀಕರಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
“ಪೂರ್ವ ಮತ್ತು ಪಶ್ಚಿಮ ಚಂಪಾರಣ್, ನಳಂದಾ, ಔರಂಗಾಬಾದ್, ಕೈಮೂರ್, ಬಕ್ಸರ್, ಸಿವಾನ್, ರೋಹ್ತಾಸ್, ಸರನ್, ಪಾಟ್ನಾ, ವೈಶಾಲಿ, ಮುಜಾಫರಪುರ, ಸಮಸ್ತಿಪುರ, ಗೋಪಾಲಗಂಜ್ ಮತ್ತು ಅರ್ವಾಲ್ ಜಿಲ್ಲೆಗಳಲ್ಲಿ ಮುಳುಗಿದ ಘಟನೆಗಳು ವರದಿಯಾಗಿವೆ.