ಬೆಳಗಾವಿ : ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಯವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಬೇಡಿಕೆ ಇಟ್ಟು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವುದನ್ನು ಕನ್ನಡ ಹೋರಾಟಗಾರ ಅಶೋಕ ಚಂದರಗಿ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು,ಕೇವಲ ಪ್ರಚಾರಕ್ಕಾಗಿ, ರಾಜಕೀಯ ಕಾರಣಕ್ಕಾಗಿ ಇಂಥ ಬೇಡಿಕೆಗಳು ಕಳೆದ ಅನೇಕ ದಶಕಗಳಿಂದ ಬೇರೆ ಬೇರೆ ನಾಯಕರಿಂದ ಬರುತ್ತಲೇ ಇವೆ. ಮೊದಲು ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಲು ಯಾರು ಕಾರಣ ಎಂಬ ಬಗ್ಗೆ ಚರ್ಚೆ ನಡೆಯಲಿ. ಉತ್ತರ ಕರ್ನಾಟಕದ 14 ಜಿಲ್ಲೆಗಳ 96 ಶಾಸಕರು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮ ವಹಿಸಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ನಾವು ನಮ್ಮ ಕಾಲುಗಳ ಮೇಲೆ ನಿಲ್ಲಲು ಸಾಧ್ಯವೇ? ನಮ್ಮ ಆದಾಯ ಮೂಲಗಳೇನು? ಎಂದು ಅವರು ಪ್ರಶ್ನಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಆದಾಯ ಮೂಲಗಳನ್ನು
ಸೃಷ್ಟಿಸಲು ನಮ್ಮ ಶಾಸಕರು ಮಾಡಿದ್ದೇನು? ರಾಜು ಕಾಗೆ ಅವರು ಮೊದಲು ತಮ್ಮ ನಿಲುವನ್ನು ಬೆಂಬಲಿಸುವ ಕನಿಷ್ಠ 10 ಶಾಸಕರನ್ನೂ ಕಲೆ ಹಾಕಿ ಇದೇ ವಿಷಯದ ಮೇಲೆ ಚುನಾವಣೆಗೆ ಸ್ಪರ್ಧೆಸಲಿ. ಬೆಳಗಾವಿಯಿಂದ ಬೀದರವರೆಗೆ
ಪ್ರವಾಸ ಮಾಡಲಿ. ಸುಮ್ಮನೆ ಪ್ರಚಾರಕ್ಕಾಗಿ ಈ ರೀತಿ ಸಿ ಎಂ ಗೆ ಪತ್ರ ಬರೆದು ಕೂಡುವುದು ಬೇಡ. ಹೋರಾಟದ ಹಾದಿಯೇ ಬೇರೆ, ರಾಜಕೀಯವೇ ಬೇರೆ. ಆಂಧ್ರದಿಂದ ತೆಲಂಗಾಣ ಪ್ರತ್ಯೇಕ ರಾಜ್ಯವಾಗಬೇಕಾದರೆ ಏನೆಲ್ಲಾ ಆಯಿತು ಎಂಬುದನ್ನು ಕಾಗೆ ಅವರು ಮೊದಲು ಅಭ್ಯಾಸ ಮಾಡಲಿ. ಅಂದ ಹಾಗೆ ಕಾಗೆ ಹಾಗೂ ನಾನು 1997 ರಲ್ಲಿ ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿಯಲ್ಲಿ ಕೂಡಿ ಕೆಲಸ ಮಾಡಿದವರು ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.


