ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವಸ್ಥಾನದ ವತಿಯಿಂದ ಭಕ್ತರಿಗೆ ಬೆಳಗಿನ ಉಪಾಹಾರ ನೀಡುವ ಬಗ್ಗೆ ದೇಗುಲದ ನೂತನ ವ್ಯವಸ್ಥಾಪನ ಸಮಿತಿ ಯೋಜನೆ ರೂಪಿಸಿದೆ.
ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಶೀಘ್ರ ಭಕ್ತರಿಗೆ ಬೆಳಗ್ಗಿನ ಹೊತ್ತು ಉಪಾಹಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಮೆನು, ಸಮಯದ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರವನ್ನು ವ್ಯವಸ್ಥಾಪನ ಸಮಿತಿ ಕೈಗೊಳ್ಳಲಿದ್ದು, ಬಳಿಕ ಈ ಹೊಸ ಯೋಜನೆ ಅನುಷ್ಠಾನಕ್ಕೆ ಬರಲಿದೆ.
ಕ್ಷೇತ್ರದಲ್ಲಿ ಈಗಾಗಲೇ ಮಧ್ಯಾಹ್ನ ಹಾಗೂ ರಾತ್ರಿಯ ಭೋಜನ ಪ್ರಸಾದ ವಿತರಿಸಲಾಗುತ್ತಿದೆ. ದಿನಂಪ್ರತಿ ಸಾವಿರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ಬೆಳಗಿನ ಉಪಾಹಾರ ಯೋಜನೆಯಿಂದ ಭಕ್ತರಿಗೆ ಇನ್ನಷ್ಟು ಪ್ರಯೋಜನವಾಗಲಿದೆ.
ಕೋಟಿ ರೂ.ವೆಚ್ಚದಲ್ಲಿ ಬೆಳ್ಳಿ ರಥ :
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಒಂದು ಕೋಟಿ ರೂ. ವೆಚ್ಚದ ಬೆಳ್ಳಿ ರಥ ನಿರ್ಮಾಣಗೊಳ್ಳಲಿದೆ.
ಸುಳ್ಯದ ಡಾ.ಕೆ.ವಿ.ರೇಣುಕಾಪ್ರಸಾದ್ ಕುರುಂಜಿ ಅವರು ಸೇವಾರ್ಥವಾಗಿ ಈ ರಥವನ್ನು ನೀಡುತ್ತಿದ್ದು, ಈ ವಿಷಯವನ್ನು ದೇವಸ್ಥಾನಕ್ಕೆ ಪತ್ರ ಬರೆದು ತಿಳಿಸಿದ್ದಾರೆ. ವಾರದೊಳಗೆ ರಥ ನಿರ್ಮಾಣ ಸಂಬಂಧ ದೇವಸ್ಥಾನದಲ್ಲಿ ಸಂಕಲ್ಪ ನಡೆಯಲಿದೆ. ರಥವನ್ನು ರಾಷ್ಟ್ರ ಮಟ್ಟದ ಶ್ರೇಷ್ಠ ಶಿಲ್ಪಿ ಮತ್ತು ಕುಕ್ಕೆ ದೇವಳದ ಬ್ರಹ್ಮರಥ ನಿರ್ಮಿಸಿದ ರಾಜಗೋಪಾಲ ಆಚಾರ್ಯ ಕೋಟೇಶ್ವರ ನಿರ್ಮಿಸಲಿದ್ದಾರೆ. ಈಗಾಗಲೇ 172 ರಥ ನಿರ್ಮಿಸಿ ಕೊಟ್ಟ ಹೆಗ್ಗಳಿಕೆ ಇವರದ್ದಾಗಿದ್ದು, ಇದು 14 ನೇ ಬೆಳ್ಳಿರಥವಾಗಿದೆ.
ಶ್ರೀ ದೇವಳದ ಪ್ರಧಾನ ಅರ್ಚಕರ ಮಾರ್ಗದರ್ಶನದಂತೆ ಪೂರ್ವ ಶಿಷ್ಠ ಸಂಪ್ರದಾಯಕ್ಕೆ ಅನುಗುಣವಾಗಿ ಹಲವು ಕೆತ್ತನೆಗಳೊಂದಿಗೆ ರಥ ನಿರ್ಮಾಣವಾಗಲಿದೆ. ಈ ಸಂಬಂಧ ಗುರುವಾರ ದೇಗುಲದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಈ ವಿಷಯ ತಿಳಿಸಿದ್ದು, ಇದಕ್ಕೆ ಸಂಬಂಧಿಸಿದ ಕೆಲವು ಇಲಾಖೆ ಪ್ರಕ್ರಿಯೆ ಶೀಘ್ರವೇ ನಡೆಯಲಿದೆ. ನವಂಬರ್ನಲ್ಲಿ ನಡೆಯುವ ಚಂಪಾಷಷ್ಠಿ ಮೊದಲು ಬೆಳ್ಳಿರಥ ಪುರ ಪ್ರವೇಶಿಸಲಿದೆ ಎಂದರು.