ನವದೆಹಲಿ: ಕೇಂದ್ರ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫೆಬ್ರವರಿ 12, ಗುರುವಾರದಂದು ದೇಶಾದ್ಯಂತ ಮುಷ್ಕರಕ್ಕೆ (ಭಾರತ್ ಬಂದ್) ಕರೆ ನೀಡಿವೆ. ಗುರುವಾರ ಮಧ್ಯರಾತ್ರಿಯಿಂದ ಆರಂಭವಾಗಲಿರುವ ಈ ಮುಷ್ಕರ ಮುಂದಿನ 24 ಗಂಟೆಗಳ ಕಾಲ ಮುಂದುವರಿಯಲಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ಸುಧಾರಣೆಗಳು ಮತ್ತು ಆರ್ಥಿಕ ನೀತಿಗಳು ಕಾರ್ಮಿಕರ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಆರೋಪಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘಟನೆಗಳ ಸುಮಾರು 30 ಕೋಟಿ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಬ್ಯಾಂಕ್ಗಳು, ಸಾರಿಗೆ ಸಂಸ್ಥೆಗಳು (ಬಸ್), ಸರ್ಕಾರಿ ಕಚೇರಿಗಳು ಮತ್ತು ಕೈಗಾರಿಕೆಗಳ ಕಾರ್ಯಚಟುವಟಿಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಆದರೆ, ಆಸ್ಪತ್ರೆ ಮತ್ತು ಆಂಬ್ಯುಲೆನ್ಸ್ನಂತಹ ತುರ್ತು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.
ಯಾರೆಲ್ಲಾ ಭಾಗವಹಿಸಲಿದ್ದಾರೆ?
ಒಟ್ಟು 10 ಕೇಂದ್ರ ಕಾರ್ಮಿಕ ಸಂಘಟನೆಗಳ ಒಕ್ಕೂಟ ಈ ಮುಷ್ಕರವನ್ನು ಸಂಘಟಿಸುತ್ತಿದ್ದು, ಸುಮಾರು 30 ಕೋಟಿ ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದೆ. ಮುಷ್ಕರದಲ್ಲಿ ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ (INTUC), ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC),
ಹಿಂದ್ ಮಜ್ದೂರ್ ಸಭಾ (HMC), ಭಾರತೀಯ ಟ್ರೇಡ್ ಯೂನಿಯನ್ಗಳ ಕೇಂದ್ರ (CITU), ಅಖಿಲ ಭಾರತ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC), ಟ್ರೇಡ್ ಯೂನಿಯನ್ ಸಮನ್ವಯ ಕೇಂದ್ರ (TUCC), ಸ್ವಯಂ ಉದ್ಯೋಗಿ ಮಹಿಳಾ ಸಂಘ (SEWA),ಅಖಿಲ ಭಾರತ ಕೇಂದ್ರೀಯ ಟ್ರೇಡ್ ಯೂನಿಯನ್ಗಳ ಮಂಡಳಿ (AICCTU), ಲೇಬರ್ ಪ್ರೊಗ್ರೆಸ್ಸಿವ್ ಫೆಡರೇಶನ್ (LPF), ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (UTUC) ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ.
ಬಂದ್ ಏಕೆ? ಪ್ರಮುಖ ಕಾರಣಗಳೇನು?
29 ಕಾರ್ಮಿಕ ಕಾನೂನುಗಳ ಬದಲಿಗೆ ಜಾರಿಗೆ ತರಲಾದ 4 ಹೊಸ ಕಾರ್ಮಿಕ ಸಂಹಿತೆಗಳನ್ನು ಸಂಘಟನೆಗಳು ವಿರೋಧಿಸುತ್ತಿವೆ. ಇದರಿಂದ ಉದ್ಯೋಗ ಭದ್ರತೆ ಕಡಿಮೆಯಾಗುತ್ತದೆ ಎಂಬುದು ಅವರ ಆತಂಕ.
ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣವನ್ನು ಕೈಬಿಡಬೇಕು ಎಂಬುದು ಪ್ರತಿಭಟನಾಕಾರರ ಒತ್ತಾಯ.
ಸ್ಥಗಿತಗೊಂಡಿರುವ ವೇತನ ಪರಿಷ್ಕರಣೆ ಮತ್ತು ಸಾಮಾಜಿಕ ಭದ್ರತೆಯ ಕೊರತೆಯನ್ನು ನೀಗಿಸಲು ಒತ್ತಾಯಿಸಲಾಗಿದೆ.
ಹೊಸ ಕಾಯ್ದೆಗಳ ರದ್ದು: ಎಲೆಕ್ಟ್ರಿಸಿಟಿ ತಿದ್ದುಪಡಿ ಕಾಯ್ದೆ, ಬೀಜ ಕಾಯ್ದೆ ಮತ್ತು ಇತ್ತೀಚಿನ ‘ವಿಕಸಿತ ಭಾರತ – ರೋಗ್ಜಾರ್ ಮಿಷನ್ ಆಕ್ಟ್ 2025’ ಅನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಲಾಗಿದೆ.
ರೈತ ಸಂಘಟನೆಗಳ ಬೆಂಬಲ ಏಕೆ?
ಸಂಯುಕ್ತ ಕಿಸಾನ್ ಮೋರ್ಚಾ (SKM) ಮತ್ತು ಅಖಿಲ ಭಾರತ ಕಿಸಾನ್ ಸಭಾ ಕೂಡ ಈ ಬಂದ್ಗೆ ಸಂಪೂರ್ಣ ಬೆಂಬಲ ಘೋಷಿಸಿವೆ. ಭಾರತ-ಅಮೆರಿಕ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಭಾರತೀಯ ಕೃಷಿ ಕ್ಷೇತ್ರವನ್ನು ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಿಗೆ ಅಡವಿಟ್ಟಂತೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಹೈನುಗಾರಿಕೆ ಮತ್ತು ಸೋಯಾಬೀನ್ ಮಾರುಕಟ್ಟೆಯನ್ನು ವಿದೇಶಿ ಕಂಪನಿಗಳಿಗೆ ಮುಕ್ತಗೊಳಿಸುವುದರಿಂದ ಸ್ಥಳೀಯ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.


