ನವದೆಹಲಿ: ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಅಭ್ಯರ್ಥಿಯಾಗಲು ಮೂರು ವರ್ಷಗಳ ವಕೀಲಿಕೆ ಮಾಡುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ಈ ಆದೇಶವನ್ನು ಪ್ರಕಟಿಸಿದೆ.
ಅಭ್ಯರ್ಥಿಯು ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾಲ ವಕೀಲರಾಗಿ ಕೆಲಸ ಮಾಡಿದ್ದಾನೆಯೇ ಎಂಬುದನ್ನು ಹತ್ತು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದ ವಕೀಲರಿಂದ ಪ್ರಮಾಣೀಕರಿಸಬೇಕು ಎಂದೂ ನ್ಯಾಯಾಲಯ ಹೇಳಿದೆ.
‘ಕಾನೂನು ಪದವೀಧರರನ್ನು ನೇರವಾಗಿ ನ್ಯಾಯಾಧೀಶರನ್ನಾಗಿ ನೇಮಕ ಮಾಡುತ್ತಿರುವುದರಿಂದ ಬಹಳಷ್ಟು ಸಮಸ್ಯೆಗಳಾಗುತ್ತಿವೆ ಎಂದು ಹೈಕೋರ್ಟ್ಗಳು ಗಮನಿಸಿವೆ. ನ್ಯಾಯಾಂಗ ದಕ್ಷತೆ ಮತ್ತು ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದಲ್ಲಿ ಪ್ರಾಯೋಗಿಕ ಅನುಭವ ಪಡೆಯುವ ಅಗತ್ಯವಿದೆ’ ಎಂದು ಪೀಠ ತಿಳಿಸಿದೆ.
ಆದರೆ, ಇದು ಈಗಾಗಲೇ ನಡೆಯುತ್ತಿರುವ ನ್ಯಾಯಾಂಗ ನೇಮಕಾತಿಗೆ ಅನ್ವಯಿಸುವುದಿಲ್ಲ. ಭವಿಷ್ಯದ ನೇಮಕಾತಿಗೆ ಈ ನಿಯಮವನ್ನು ಪರಿಗಣಿಸಬೇಕು ಎಂದು ಸ್ಪಷ್ಟಪಡಿಸಿದೆ.