ಇಸ್ಲಾಮಾಬಾದ್ :
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರದ ವಿರುದ್ಧದ ನಡೆಯುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಮಂಗಳವಾರ (ಸೆ.30) ತೀವ್ರಗೊಂಡಿದ್ದು, ಪ್ರತಿಭಟನಾಕಾರರು ಬೃಹತ್ ಕಂಟೇನರ್ಗಳನ್ನು ನದಿಗೆ ಎಸೆದಿದ್ದಾರೆ.
ಹಿಂಸಾತ್ಮಕ ಘರ್ಷಣೆಗಳಲ್ಲಿ ಇಬ್ಬರು ಮೃತಪಟ್ಟು, ಸುಮಾರು ಎರಡು ಡಜನ್ ಜನರು ಗಾಯಗೊಂಡ ಒಂದು ದಿನದ ನಂತರ, ಪ್ರತಿಭಟನಾಕಾರರು ಮುಂದೆ ಸಾಗದಂತೆ ತಡೆಯಲು ಪಾಕಿಸ್ತಾನಿ ಪಡೆಗಳು ಮಂಗಳವಾರ ಬೆಳಿಗ್ಗೆ ಕಂಟೇನರ್ಗಳನ್ನು ನಿಲ್ಲಿಸಿದ್ದರು. ಡಜನ್ಗಟ್ಟಲೆ ಪ್ರತಿಭಟನಾಕಾರರು ಒಟ್ಟಾಗಿ ಕಂಟೇನರ್ಗಳನ್ನು ಸೇತುವೆಯಿಂದ ಕೆಳಗೆ ಹರಿಯುತ್ತಿರುವ ನದಿಗೆ ತಳ್ಳಿದ್ದಾರೆ.
ಮೂಲಭೂತ ಹಕ್ಕುಗಳ ನಿರಾಕರಣೆಯ ಕುರಿತು ಅವಾಮಿ ಕ್ರಿಯಾ ಸಮಿತಿ (ಎಸಿಸಿ) ನೇತೃತ್ವದ ನಾಗರಿಕರು ಪಾಕಿಸ್ತಾನ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಗಳ ಸಮಯದಲ್ಲಿ ಘರ್ಷಣೆಗಳು ಭುಗಿಲೆದ್ದವು. ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಸಂಪೂರ್ಣವಾಗಿ ಸ್ಥಗಿತಗೊಂಡವು, ಸಾರಿಗೆ ಬಸ್ಸುಗಳು ಸಹ ಹಾನಿಗೊಳಗಾದವು.
ಪ್ರತಿಭಟನಾಕಾರರು ಪಾಕಿಸ್ತಾನ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದರೊಂದಿಗೆ ಮಂಗಳವಾರ ಮತ್ತೆ ಪ್ರದರ್ಶನಗಳು ಪುನರಾರಂಭಗೊಂಡವು, ಹಲವರು ಕೋಲುಗಳನ್ನು ಹಿಡಿದು ಶಸ್ತ್ರಸಜ್ಜಿತರಾಗಿ ಪಾಕಿಸ್ತಾನ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದನ್ನು ದೃಶ್ಯಗಳು ತೋರಿಸಿವೆ.
ಪಾಕಿಸ್ತಾನದಲ್ಲಿ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ ಪಿಒಕೆ ಅಸೆಂಬ್ಲಿಯಲ್ಲಿ 12 ಸ್ಥಾನಗಳನ್ನು ರದ್ದುಗೊಳಿಸುವುದು ಸೇರಿದಂತೆ ಪ್ರತಿಭಟನಾಕಾರರು 38 ಅಂಶಗಳ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತಹ ಮೀಸಲಾತಿ ಪ್ರತಿನಿಧಿ ಆಡಳಿತವನ್ನು ದುರ್ಬಲಗೊಳಿಸುತ್ತವೆ ಎಂದು ಸ್ಥಳೀಯರು ವಾದಿಸುತ್ತಾರೆ.
“ನಮ್ಮ ಅಭಿಯಾನವು 70 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಜನರಿಗೆ ನಿರಾಕರಿಸಲ್ಪಟ್ಟ ಮೂಲಭೂತ ಹಕ್ಕುಗಳಿಗಾಗಿ ನಡೆಯುತ್ತಿದೆ. ಹಕ್ಕುಗಳನ್ನು ಕೊಡಿ ಅಥವಾ ಜನರ ಆಕ್ರೋಶವನ್ನು ಎದುರಿಸಿ” ಎಂದು ಎಎಸಿ (AAC) ನಾಯಕ ಶೌಕತ್ ನವಾಜ್ ಮಿರ್ ಘೋಷಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಅವರ ಸರ್ಕಾರವನ್ನು ಮೂಲೆಗುಂಪು ಮಾಡುವ ಹೆಚ್ಚು ತೀವ್ರವಾದ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪಾಕ್ ಆಕ್ರಮಿತ ಕಾಶಮೀರದಲ್ಲಿ ಪಟ್ಟಣಗಳಲ್ಲಿ ಪಾಕಿಸ್ತಾನ ಸರ್ಕಾರವು ಅದು ಭಾರೀ ಪ್ರಮಾಣದಲ್ಲಿ ಸಶಸ್ತ್ರ ಪಡೆಗಳನ್ನು ನಿಯೋಜಿಸಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ. ಪ್ರದೇಶದಾದ್ಯಂತ ಇಂಟರ್ನೆಟ್ ನಿರ್ಬಂಧಿಸಲಾಗಿದೆ. ಪಿಒಕೆಯ ರಾವಲಕೋಟ್, ಹಜಿರಾ, ಅಬ್ಬಾಸಪುರ, ಖೈ ಗಾಲಾ, ಪನಿಯೋಲಾ ಮತ್ತು ಟ್ರಾಖೇಲ್ಗಳಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ಹೇಳುತ್ತವೆ.
ಜಮ್ಮು ಮತ್ತು ಕಾಶ್ಮೀರ ಜಂಟಿ ಸಾರ್ವಜನಿಕ ಕ್ರಿಯಾ ಸಮಿತಿಯ ನಾಯಕ ಶೌಕತ್ ನವಾಜ್ ಮಿರ್ ಅಕ್ಟೋಬರ್ 1 ರಂದು ಪಿಒಕೆಯ ಹಲವಾರು ಪ್ರಮುಖ ಪಟ್ಟಣಗಳು ಮತ್ತು ಜಿಲ್ಲೆಗಳಿಂದ ಮುಜಫರಾಬಾದ್ ಕಡೆಗೆ ದೀರ್ಘ ಮೆರವಣಿಗೆ ನಡೆಸುವುದಾಗಿ ಘೋಷಿಸಿದ್ದಾರೆ.
ಪ್ರತಿಭಟನೆಗಳು ಕೇವಲ ಮುಜಫರಾಬಾದ್ ಅಥವಾ ಪಿಒಕೆಗೆ ಸೀಮಿತವಾಗಿಲ್ಲ. ಪ್ರತಿರೋಧವನ್ನು ವಿದೇಶಗಳಲ್ಲಿಯೂ ಕಾಣಬಹುದು. ಬ್ರಿಟಿಷ್ ಕಾಶ್ಮೀರಿಗಳು ಪ್ರತಿಭಟನೆಗಳಲ್ಲಿ ಸೇರಿಕೊಂಡಿದ್ದಾರೆ, ಲಂಡನ್ನಲ್ಲಿರುವ ಪಾಕಿಸ್ತಾನಿ ಹೈಕಮಿಷನ್ ಮತ್ತು ಬ್ರಾಡ್ಫೋರ್ಡ್ನಲ್ಲಿರುವ ಅವರ ದೂತಾವಾಸದ ಹೊರಗೆ ಪ್ರತಿಭಟನೆಗಳು ನಡೆದಿವೆ.