ಬೆಳಗಾವಿ : ಬೆಳಗಾವಿಯಲ್ಲಿ 29ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಹಾಸಮ್ಮೇಳನ ಏರ್ಪಡಿಸಲಾಗುತ್ತಿದೆ. ಮಂಗಳವಾರ ನಗರದಲ್ಲಿ ಮಾಜಿ ಸಚಿವ ಹಾಗೂ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಘಟಕದ ಅಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಶಿಬಿರ ಡಿಸೆಂಬರ್ 27 ರಿಂದ ಜ.1 ರವರೆಗೆ ಬೆಳಗಾವಿಯ ಹೊನಗಾ ಗ್ರಾಮದ ಫಿನಿಕ್ಸ್ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ. ರಾಜ್ಯಾದ್ಯಂತದ ವಿವಿಧ ಜಿಲ್ಲೆಗಳ ಸೈಟ್, ಗೈಡ್, ರೋವರ್ ಮತ್ತು ರೇಂಜರ್ ಗಳು ಈ ಶಿಬಿರದಲ್ಲಿ ಭಾಗವಹಿಸಲಿವೆ. ಸುಮಾರು 5000 ಸಾವಿರಕ್ಕೂ ಹೆಚ್ಚು ಮಕ್ಕಳು ಮತ್ತು ದಳ ನಾಯಕರು ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಶಿಬಿರದ ಉದ್ದೇಶ ಯುವಕರಲ್ಲಿ ಶಿಸ್ತು, ಸೇವಾಭಾವ, ನಾಯಕತ್ವ ಮತ್ತು ಸಹಕಾರದ ಮನೋಭಾವ ಬೆಳೆಸುವುದು. ಶಿಬಿರದ ಅವಧಿಯಲ್ಲಿ ವಿವಿಧ ಸಾಹಸ ಚಟುವಟಿಕೆಗಳು, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಸಾಂಸ್ಕೃತಿಕ ಸಂಜೆಗಳು, ಪರಿಸರ ಸಂರಕ್ಷಣೆ ಯೋಜನೆಗಳು ನಡೆಯಲಿವೆ.ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ವಿವಿಧ ಉಪ-ಸಮಿತಿಗಳು ರಚಿಸಲ್ಪಟ್ಟಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ವಿದ್ಯುತ್ ಮಂಡಳಿ, ಮಹಾನಗರ ಪಾಲಿಕೆ ಹಾಗೂ ಶಿಕ್ಷಣ ಇಲಾಖೆಗಳಿಂದ ಸಂಪೂರ್ಣ ಸಹಕಾರ ದೊರೆಯುತ್ತಿದೆ ಎಂದು ವಿವರಿಸಿದರು.
ಜಾಂಬೋರೇಟ್ ಅಂದರೆ ಸೈಟ್-ಗೈಡ್ಸ್ ನಲ್ಲಿ ನಾಯಕತ್ವ, ಭ್ರಾತೃತ್ವ,ಶಿಸ್ತು, ಸೌಹಾರ್ದತೆ, ದೇಶಭಕ್ತಿ, ಸಹಜೀವನ ಕೌಶಲ್ಯಗಳ ಕಲಿಕೆ ಮತ್ತು ಪ್ರತಿಭೆಗಗಳು ಹೊರ ಹೊಮ್ಮುವ ಜೀವನ ಶಿಕ್ಷಣ ನೀಡುವ ಒಂದು ಬೃಹತ್ “ಮಕ್ಕಳ ಮೇಳ”. ಪ್ರಾತಃಕಾಲದ ವ್ಯಾಯಾಮದಿಂದ ಪ್ರಾರಂಭಿಸಿ ರಾತ್ರಿ ಮಲಗುವವರೆಗೂ ಕ್ರಮಬದ್ಧ ಹಾಗೂ ಅಚ್ಚುಕಟ್ಟಾದ ಕೆಲಸಗಳ ಹಂಚಿಕೆ, ವಿವಿಧ ಹೊರಾಂಗಣ ಸಾಹಸ ಚಟುವಟಿಕೆಗಳು ಹಾಗೂ ಪ್ರತಿದಿನ ಸಂಜೆ ದಣಿದ ಮನಕ್ಕೆ ಮುದನೀಡುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಕರ್ನಾಟಕದ ಮೂಲೆ ಮೂಲೆಗಳಿಂದ ಆಗಮಿಸಿ ತಮ್ಮ ಸ್ಥಳೀಯ ಸೊಗಡನ್ನು ಬಿಂಬಿಸುವ ಪ್ರದರ್ಶನಗಳು ಹೀಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಹೇಳಿ ಮಾಡಿಸಿದ ವೇದಿಕೆಯೇ ಈ ಜಾಂಬೋರೇಟ್ ಆಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ಜಿಲ್ಲಾ ಸಂಸ್ಥೆ ಬೆಳಗಾವಿ ಇವರ ಸಹಯೋಗದಲ್ಲಿ 29ನೇ ಕರ್ನಾಟಕ ರಾಜ್ಯ ಸೈಟ್ ಮತ್ತು ಗೈಡ್ ಜಾಂಬೋರೇಟ್ ಕಾರ್ಯಕ್ರಮವನ್ನು ಈ ಬಾರಿಯು ಬೆಳಗಾವಿ ಜಿಲ್ಲೆಯಲ್ಲಿ ಭವ್ಯವಾಗಿ ಆಯೋಜಿಸಲಾಗಿದೆ.
ಈ ಜಾಂಬೋರೇಟ್ ಜಿಲ್ಲೆಯ ಸೈಟಿಂಗ್ ಚಟುವಟಿಕೆಗೆ ಹೊಸ ಶಕ್ತಿ ನೀಡಲಿದೆ” ಎಂದು ತಿಳಿಸಿದರು. 2001 ರಲ್ಲಿ 24ನೇ ಜಾಂಬೋರೇಟ್ ಯಶಸ್ವಿಯಾಗಿ ಆಯೋಜಿಸಿದ ಬೆಳಗಾವಿಗೆ 25 ವರ್ಷಗಳ ಬಳಿಕ ಮತ್ತೊಮ್ಮೆ ಈ ಸದವಕಾಶ ಲಭಿಸಿದೆ. ಆದಕಾರಣ ಬೆಳಗಾವಿ ಜಿಲ್ಲೆಯ ಎಲ್ಲಾ ಕೊಡುಗೈ ದಾನಿಗಳು, ಸಂಘ-ಸಂಸ್ಥೆಯವರು ಹಾಗೂ ಜನಪ್ರತಿನಿಧಿಗಳು ತನು ಮನ ಧನಗಳಿಂದ ಸಹಕರಿಸಲು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ,ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ, ರಾಜ್ಯ ಸಂಘಟನಾ ಆಯುಕ್ತ.
ಪ್ರಭಾಕರ ಭಟ್ ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿ ವಿಠ್ಠಲ್, ಎಸ್.ಜೆ.ಏಳುಕೋಟಿ, ಮಹೇಶ್ ಪೂಜಾರಿ, ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ 29 ನೇ ಕರ್ನಾಟಕ ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್


