ಬೆಳಗಾವಿ : ಮಕ್ಕಳು ದೇಶದ ಸಂಪತ್ತು. ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಗೆ ಸಕ್ರಿಯವಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಭಾರತ ವಿಶ್ವದಲ್ಲೇ ಮೊದಲ ಸ್ಥಾನ ಪಡೆಯುವುದು ಪ್ರತಿಯೊಬ್ಬರ ಕನಸು. ಭಾರತ ಬಲಿಷ್ಠವಾಗಲು ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದು ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ(ಫರೀದ್) ತಿಳಿಸಿದರು.
ಹೊನಗಾ ಗ್ರಾಮದ ಫಿನಿಕ್ಸ್ ಪಬ್ಲಿಕ್ ಶಾಲೆಯಲ್ಲಿ ಶನಿವಾರ (ಡಿ.27) ನಡೆದ 29ನೇ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರೇಟ್ -2025 ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಯದ ಮೌಲ್ಯ ತಿಳಿದು ಸರಿಯಾಗಿ ಸಮಯವನ್ನು ಬಳಸಿಕೊಂಡು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಬರುವ ದಿನಗಳಲ್ಲಿ ನಿಮ್ಮ ವ್ಯಕ್ತಿತ್ವ ನಿಮ್ಮನ್ನು ಹೆಚ್ಚಿನ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎಂದರು.
ಮಕ್ಕಳು ಉತ್ತಮ ಪ್ರಜೆಗಳಾಗಿ ಉನ್ನತ ಸ್ಥಾನ ಪಡೆದುಕೊಂಡು ಸಮಾಜ ಸುಧಾರಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡುವುದು ಶಿಕ್ಷಕರ ಕೆಲಸ. ಅದರಂತೆ ಮಕ್ಕಳಿಗೆ ಶಿಸ್ತು ಕಲಿಸುವುದು ಸ್ಕೌಟ್ಸ್ ಮತ್ತು ಗೈಡ್ ಕೆಲಸವಾಗಿದೆ. ಸ್ಕೌಟ್ಸ್ ಜೀವನದಲ್ಲಿ ಉತ್ತಮ ಪಾಠ ಪರಿಸರ ಕಲಿಸಿಕೊಡುತ್ತದೆ ಎಂದು ಹೇಳಿದರು.
5 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಯಾವುದೇ ಜಾತಿ, ಧರ್ಮ ಇಲ್ಲದೇ ಎಲ್ಲರೂ ಸರಿಸಮ ಎಂಬ ಪಾಠ ಹೇಳಿಕೊಡಲಾಗುತ್ತದೆ.
ಜಗಜ್ಯೋತಿ ಬಸವಣ್ಣನವರ ಕಾಯಕವೇ ಕೈಲಾಸ, ಎಲ್ಲರೂ ಸಮಾನರೆಂಬ ಪಾಠ ಇಲ್ಲಿ ಕಲಿಸಲಾಗುತ್ತದೆ.
ಎಲ್ಲಾ ಮಕ್ಕಳ ದೇಶಪ್ರೇಮಿಗಳಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು. ಮಕ್ಕಳು ತಂದೆ-ತಾಯಿ ಶಿಕ್ಷರಿಗೆ ಗೌರವ ತರುವ ಕೆಲಸ ಮಾಡುವ ಮೂಲಕ ಶ್ರೇಷ್ಠ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ಸಂಸದ ಜಗದೀಶ ಶೆಟ್ಟರ ಮಾತನಾಡಿ,
ವಿದ್ಯಾರ್ಥಿಗಳಿಗೆ ಶಾಲಾ ಚಟುವಟಿಕೆಗಳ ಜೊತೆಗೆ ದೈಹಿಕ, ಮಾನಸಿಕವಾಗಿ ಉತ್ತೇಜನೆ ನೀಡುವ ಕಾರ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಾಡುತ್ತಿದೆ. ಇದರಿಂದ ವಿಧ್ಯಾರ್ಥಿಗಳು ಶಿಸ್ತು ಬದ್ಧ ಜೀವನ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ ಇನ್ನೂ ಮುಂಚೂಣಿಯಲ್ಲಿ ಬೆಳೆಯುವಂತೆ ಶಿಕ್ಷಣ ಇಲಾಖೆಯ ಜವಾಬ್ದಾರಿಯಾಗಿದೆ. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲು ಸ್ಕೌಟ್ಸ್ ಮತ್ತು ಗೈಡ್ ಬಹಳ ಮುಖ್ಯವಾಗಿದೆ. ಈಗಾಗಲೇ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಸುವುದು ನನ್ನ ಅರಿವಿಗೆ ಬಂದಿದ್ದು, ಹೆಚ್ಚಿನ ಮಟ್ಟದಲ್ಲಿ ಸ್ಕೌಟ್ಸ್ ಮತ್ತು ಗೈಡ್ ಗೆ ಇನ್ನೂ ಹೆಚ್ಚು ಒತ್ತು ಕೊಡಲಾಗುವುದು ಎಂದರು.
ರಾಜ್ಯದ ಪ್ರತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ ಪ್ರಾರಂಭಿಸಲು ಚಿಂತಿಸಲಾಗುವುದು. ಸ್ಕೌಟ್ಸ್ ಮತ್ತು ಗೈಡ್ ನಲ್ಲಿ ಮಕ್ಕಳಿಗೆ ಮಾನವೀಯತೆಯ ಮೌಲ್ಯಗಳನ್ನು ಕೊಡಲಾಗುತ್ತಿದ್ದು, ಮಕ್ಕಳು ಶ್ರದ್ಧೆಯಿಂದ ಶಿಸ್ತು ಕಲಿತುಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜನೆಯಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದು ಸೇರಿರುವ ಮಕ್ಕಳನ್ನು ಉತ್ತಮ ದಾರಿಯಲ್ಲಿ ಬಳಸಿಕೊಂಡಲ್ಲಿ ಭವ್ಯ ಭಾರತ ನಿರ್ಮಾಣಕ್ಕೆ ಅನುಕೂಲಕರವಾಗಿದೆ. ಇದೊಂದು ಕೌಶಲ್ಯಗಳನ್ನು ಮಾನವಿಯ ಮೌಲ್ಯಗಳನ್ನು ತಿಳಿ ಹೇಳುವಂತಹ ಕಾರ್ಖಾನೆಯಂತಿದ್ದು, ಈ ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಭವ್ಯ ಭಾರತ ನಿರ್ಮಾಣಕ್ಕೆ ಮುಂದಾಗಲು ಕರೇ ನೀಡಿದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲದ ಆಧ್ಯಾತ್ಮಿಕ ಕೆಲಸವನ್ನು ಸ್ಕೌಟ್ಸ್ ಮತ್ತು ಗೈಡ್ ಮಾಡುತ್ತದೆ. ಎಲ್ಲರ ಸಹಕಾರದಿಂದ 7 ದಿನಗಳ ಕಾಲ ಜಾಂಬೊರೆಟ್ ಕಾರ್ಯಕ್ರಮ ನಡೆಯುತ್ತಿದೆ. 200 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ ಕೆಲಸ ಮಾಡುತ್ತಿದೆ. ಸಾಮಾಜಿಕ ಅಭಿವೃದ್ಧಿ, ಶಿಕ್ಷಣ ನಮ್ಮ ಗುರಿಯಾಗಿದೆ ಇದಕ್ಕೆ ಪೂರಕವಾಗಿ ರಾಷ್ಟ್ರದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಭೂತರಾಮನಹಟ್ಟಿಯ ಮುಕ್ತಿಮಠದ ಧರ್ಮಶ್ರೀ ತಪೋರತ್ನ ಶಿವಸಿದ್ಧ ಶಿವಾಚಾರ್ಯ ಮಹ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪೊಲೀಸ್ ಆಯುಕ್ತ ಗುಲಾಬ್ ರಾವ್ ಭೂಷಣ ಭೊರಸೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಂತರಾಷ್ಟ್ರೀಯ ಹೆಚ್ಚುವರಿ ಆಯುಕ್ತ ಎ. ಎಸ್. ಮಧುಸೂದನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಹಾಗೂ ಸ್ಥಾನಿಕ ಆಯುಕ್ತ ರಾಜಶೇಖರ ಚಳಗೇರಿ,ಎ.ಆರ್.ಅಂಬಗಿ, ಎನ್.ಆರ್.ಮೆಳವಂಕಿ,ಎಂ.ಎಂ.ಪಾಟೀಲ, ಬೆಳಗಾವಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೆ.ಆಂಜನೇಯ, ಭಾರತ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಹಾಯಕ ಆಯುಕ್ತೆ ಪ್ರಭಾವತಿ ಪಾಟೀಲ, ರಾಜ್ಯ ಕೋಶಾಧಿಕಾರಿ ಟಿ. ಪ್ರಭಾಕರ, ಡಿಒಟಿ ರಾಜಕುಮಾರ ಕುಂಬಾರ, ನಾಗೇಶ ಶಿವಾಪುರ, ವಿಠ್ಠಲ ಎಸ್, ಹನುಮಂತ ಭಜಂತ್ರಿ, ಶಿವರಾಯ ಏಳುಕೋಟಿ ಹಾಗೂ ಕರ್ನಾಟಕ ರಾಜ್ಯ ಸ್ಕೌಟ್ಸ್ ಗೈಡ್ಸ್ ಪದಾಧಿಕಾರಿಗಳು
ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಆಯುಕ್ತರು, ಉಪಾಧ್ಯಕ್ಷರು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಗಜಾನನ ಮನ್ನಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನಾ ಆಯುಕ್ತೆ ಮಂಜುಳಾ ನಿರೂಪಿಸಿದರು.
ಹಾಡು ಹಾಡಿ ಮಕ್ಕಳ ಮನ ಸೆಳೆದ ಸಭಾಪತಿ….
ತಮ್ಮ ಬಾಲ್ಯದ ಸ್ಕೌಟ್ ನ ಅನುಭವಗಳನ್ನು ನೆನೆದು ಕಾರ್ಮಿಕವಾಗಿ ಮಾತನಾಡಿ, ಕವಿ ಒಬ್ಬರು ಹೇಳಿದ ಹಾಡನ್ನು ಹಾಡನ್ನು ಹಾಡುವ ಮೂಲಕ ಮಕ್ಕಳ ಮನಸೆಳೆದರು. ಅವರು ಹಾಡಿದ ಹಾಡು ಇಂತಿದೆ. “ಹಸುರಿನ ಹಾಸ್ಯದ ಮರುಳಿನ ಲಾಸ್ಯದ ಬೆಳಗಾವಿ ಊರಿನ ಸೊಬಗಿನ್ಯಾಗ, ಈ ಚಂದದ ಮಕ್ಕಳ ನಲಿವಿನಯಾಗ ”

ಬೆಳಗಾವಿಯಲ್ಲಿ ನಡೆದಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಜಂಬೊರೇಟ್ ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಪ್ರೋತ್ಸಾಹಕ್ಕೆ ಮುನ್ನುಡಿ. ಇಂತಹ ಸಂಘಟನೆ ಸಂಘಟನಾತ್ಮಕ ಚಟುವಟಿಕೆಗಳಿಂದ ಮಕ್ಕಳ ವಿಕಸನ ಸಾಧ್ಯ.
ಬೆಳಗಾವಿಯಲ್ಲಿ ನಡೆದಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಜಂಬೊರೇಟ್ ಇದು ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಪ್ರೋತ್ಸಾಹಕ್ಕೆ ಮುನ್ನುಡಿ. ಇಂತಹ ಸಂಘಟನೆ ಸಂಘಟನಾತ್ಮಕ ಚಟುವಟಿಕೆಗಳಿಂದ ಮಕ್ಕಳ ವಿಕಾಸ ಸಾಧ್ಯ. ಇಲ್ಲಿನ ಪರಿಸರ ಮಕ್ಕಳ ಮನವನ್ನು ಆಕರ್ಷಿಸುತ್ತದೆ.
– ಶಿವಾಚಾರ್ಯ ಸ್ವಾಮೀಜಿಗಳು, ಮುಕ್ತಿ ಮಠ
ಸ್ಕೌಟ್ಸ್ ಗೈಡ್ಸ್ ಆದರ್ಶ ಜೀವನಕ್ಕೆ ಅನುಕೂಲ. ನೀವೆಲ್ಲರೂ ಜೀವನದಲ್ಲಿ ಅತೀ ಉನ್ನತ ಮಟ್ಟಕ್ಕೆ ಏರುವುದರಲ್ಲಿ ಯಾವುದೇ ಸಂಶಯವಿಲ್ಲ. ಬಸವಣ್ಣನವರ ಕಾಯಕವೇ ಕೈಲಾಸ ಮಾತಿನಂತೆ ಈ ಕಾರ್ಯಕ್ರಮ ನಿಮ್ಮೆಲ್ಲರಿಗೂ ಆದರ್ಶಪ್ರಾಯವಾಗಲಿ. ನೀವು ದೇಶಪ್ರೇಮ ಬೆಳೆಸಿಕೊಂಡು ದೇಶಭಕ್ತರಾಗಬೇಕು. ಮುಂದಿನ ದಿನಗಳಲ್ಲಿ ನೀವೆಲ್ಲರೂ ಈ ದೇಶದ ಶ್ರೇಷ್ಠ ನಾಗರಿಕರಾಗಿ ಹೊರಹೊಮ್ಮುವ ನಾಗರಿಕರಾಗಬೇಕು.
*ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನ ಪರಿಷತ್
ಬಲಿಷ್ಠ ರಾಷ್ಟ್ರ ನಿರ್ಮಾಣ ನಿಮ್ಮಿಂದ ಸಾಧ್ಯ. ನೀವು ಕೇವಲ ನಿಮ್ಮ ತಂದೆ-ತಾಯಿಯ ಸಂಪತ್ತು ಮಾತ್ರವಲ್ಲ. ಇಡೀ ದೇಶದ ಸಂಪತ್ತಾಗಬೇಕು. ನಾನು ಐದನೇ ತರಗತಿಯಲ್ಲೇ ಸ್ಕೌಟ್ಸ್ ಗೈಡ್ಸ್ ಸೇರಿದ್ದೆ. ನಾನು ಇಂದು ಈ ಸ್ಥಾನ ಹೊಂದಲು ಸ್ಕೌಟ್ಸ್ ಗೈಡ್ಸ್ ಕಾರಣ. ಭಾರತ ಜಗತ್ತಿನ ನಂಬರ್ ಒನ್ ಆಗಲು ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯ ಇಲ್ಲ. ನಿಮ್ಮಂತ ಶ್ರೇಷ್ಠ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ನೀವು ರೂಪುಗೊಳ್ಳಬೇಕು. ನೀವೆಲ್ಲರೂ ಸತ್ಪ್ರಜೆಯಾಗಲು ಸ್ಕೌಟ್ಸ್ ಗೈಡ್ಸ್ ನಿಂದ ಸಿಗುವ ತರಬೇತಿಯಿಂದ ಮಾತ್ರ ಸಾಧ್ಯ. ಮುಂದಿನ ಐದಾರು ವರ್ಷ ಕಷ್ಟ ಅನುಭವಿಸಬಹುದು. ಆದರೆ, ಇದು ನಿಮ್ಮ ಮುಂದಿನ ಬಾಳಿಗೆ ಬೆಳಕಾಗಲಿದೆ.
*ಯು.ಟಿ.ಖಾದರ್, ಸ್ಪೀಕರ್
ಕಾರ್ಯಕ್ರಮದ ಮುಖ್ಯ ರೂವಾರಿಯಾಗಿರುವ ಪಿಜಿಆರ್ ಸಿಂಧ್ಯಾ ಅವರೊಂದಿಗೆ ಎಬಿವಿಪಿಯಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇನೆ. ಸ್ಕೌಟ್ಸ್ ಗೈಡ್ಸ್ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಜೀವನಕ್ಕೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ಶಿಸ್ತುಬದ್ಧವಾಗಿ ಜೀವನ ನಡೆಸುವಂತಾಗಲು ಈ ಕಾರ್ಯಕ್ರಮದಿಂದ ಹೆಚ್ಚಿನ ಲಾಭವಾಗಲಿದೆ.
*ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ
ಇಂಗ್ಲೆಂಡ್ ನಲ್ಲಿ ಸ್ಕೌಟ್ಸ್ ಗೈಡ್ಸ್ ಆರಂಭವಾದ ಒಂದೆರಡು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆರಂಭಿಸಿದರು. ಅಂತಹ ಹಿನ್ನೆಲೆ ಈ ಸಂಸ್ಥೆಗೆ ಇದೆ. ಗಜಾನನ ಮನ್ನಿಕೇರಿಯವರು ಈ ನಾಡಿನ ದಕ್ಷ ಅಧಿಕಾರಿ. ಅವರ ನೇತೃತ್ವದಲ್ಲಿ ಈ ಜಾಂಬೋರೇಟ್ ನಡೆಯುತ್ತಿದೆ. ಏಳು ದಿನಗಳ ಕಾಲ ಈ ಕಾರ್ಯಕ್ರಮ ಯಶಸ್ವಿಯಾಗಿ ಹೊಸ ಇತಿಹಾಸ ಬರೆಯಲಿದೆ.
*ಪಿ.ಜಿ.ಆರ್.ಸಿಂಧ್ಯಾ, ಮಾಜಿ ಸಚಿವ
ಮಕ್ಕಳನ್ನು ಜಾತಿ-ಧರ್ಮ ಮೀರಿ ಬೆಳೆಯುವ ನಿಟ್ಟಿನಲ್ಲಿ ನಾವೆಲ್ಲರೂ ಒಂದು ಎನ್ನುವುದು ಸ್ಕೌಟ್ಸ್ ಗೈಡ್ಸ್ ಉದ್ದೇಶವಾಗಿದೆ. ಮಕ್ಕಳು ಗುಂಪು ಚಟುವಟಿಕೆ ಮಾಡಬೇಕು. ಈ ದಿಸೆಯಲ್ಲಿ ಸ್ಕೌಟ್ಸ್ ಗೈಡ್ಸ್ ಕೆಲಸ ಮಾಡಲಿದೆ .
*ಗಜಾನನ ಮನ್ನಿಕೇರಿ, ರಾಜ್ಯ ಉಪಾಧ್ಯಕ್ಷರು, ಸ್ಕೌಟ್ಸ್ ಗೈಡ್ಸ್


