ದೆಹಲಿ:
2021ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಶಾಂತಿ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.
ಉತ್ತರ ಪ್ರದೇಶದ ಗೋರಖಪುರದ ಗೀತಾ ಪ್ರೆಸ್ ಪ್ರಕಾಶನ ಸಂಸ್ಥೆಗೆ ಈ ಬಾರಿಯ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ತೀರ್ಪುಗಾರರ ಸಮಿತಿಯು ಶಾಂತಿ ಮತ್ತು ಸಾಮಾಜಿಕ ಸಾಮರಸ್ಯದ ಗಾಂಧಿಯವರ ಆದರ್ಶಗಳನ್ನು ಉತ್ತೇಜಿಸುವಲ್ಲಿ ನೂರು ವರ್ಷಗಳ ಹಳೆಯ ಗೋರಖ್ಪುರದ ಗೀತಾ ಪ್ರೆಸ್ ಸಂಸ್ಥೆಯ ಕೊಡುಗೆ, ಅಲ್ಲದೆ ಅಹಿಂಸಾತ್ಮಕ ಮತ್ತು ಇತರ ಗಾಂಧಿ ವಿಧಾನಗಳ ಮೂಲಕ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಗೋರಖಪುರದ ಗೀತಾ ಪ್ರೆಸ್ ನೀಡಿದ ಅತ್ಯುತ್ತಮ ಕೊಡುಗೆಯನ್ನು ಗುರುತಿಸಿ 2021 ರ ಗಾಂಧಿ ಶಾಂತಿ ಪ್ರಶಸ್ತಿಗೆ ಗೀತಾ ಪ್ರೆಸ್ ಅನ್ನು ಆಯ್ಕೆ ಮಾಡಲು ಭಾನುವಾರ (ಜೂನ್ 18) ಸರ್ವಾನುಮತದಿಂದ ನಿರ್ಧರಿಸಿತು.
1923 ರಲ್ಲಿ ಸ್ಥಾಪನೆಯಾದ ಗೀತಾ ಪ್ರೆಸ್ ವಿಶ್ವದ ಅತಿದೊಡ್ಡ ಪ್ರಕಾಶಕರಲ್ಲಿ ಒಂದಾಗಿದೆ, 16.21 ಕೋಟಿ ಶ್ರೀಮದ್ ಭಗವದ್ಗೀತೆ ಸೇರಿದಂತೆ 14 ಭಾಷೆಗಳಲ್ಲಿ 41.7 ಕೋಟಿ ಪುಸ್ತಕಗಳನ್ನು ಪ್ರಕಟಿಸಿದೆ. ಸಂಸ್ಥೆಯು ಆದಾಯಕ್ಕಾಗಿ ತನ್ನ ಪ್ರಕಟಣೆಗಳಲ್ಲಿನ ಜಾಹೀರಾತನ್ನು ಎಂದಿಗೂ ಅವಲಂಬಿಸಿಲ್ಲ.
ಪ್ರತಿಷ್ಠಿತ ಗಾಂಧಿ ಶಾಂತಿ ಪ್ರಶಸ್ತಿಯು ಮಹಾತ್ಮಾ ಗಾಂಧಿಯವರ 125 ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ 1995 ರಲ್ಲಿ ಭಾರತ ಸರ್ಕಾರ ಸ್ಥಾಪಿಸಿದ ವಾರ್ಷಿಕ ಪ್ರಶಸ್ತಿಯಾಗಿದೆ.
ಈ ಪ್ರಶಸ್ತಿ ರಾಷ್ಟ್ರೀಯತೆ, ಜನಾಂಗ, ಭಾಷೆ, ಜಾತಿ, ಮತ ಅಥವಾ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳಿಗೆ ಮುಕ್ತವಾಗಿದೆ.
ಪ್ರಶಸ್ತಿಯು 1 ಕೋಟಿ ರೂ. ನಗದು, ಪ್ರಶಸ್ತಿ ಪತ್ರ, ಫಲಕ ಮತ್ತು ಸೊಗಸಾದ ಸಾಂಪ್ರದಾಯಿಕ ಕರಕುಶಲ ಅಥವಾ ಕೈಮಗ್ಗದ ವಸ್ತುವನ್ನು ಒಳಗೊಂಡಿದೆ.
ಹಿಂದಿನ ಪ್ರಶಸ್ತಿ ಪುರಸ್ಕೃತರಲ್ಲಿ ಇಸ್ರೋ, ರಾಮಕೃಷ್ಣ ಮಿಷನ್, ಗ್ರಾಮೀಣ ಬ್ಯಾಂಕ್ ಆಫ್ ಬಾಂಗ್ಲಾದೇಶ, ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರ, ಬೆಂಗಳೂರು ಅಕ್ಷಯ ಪಾತ್ರ, ಏಕಲ್ ಅಭಿಯಾನ್ ಟ್ರಸ್ಟ್ ಮತ್ತು ಸುಲಭ್ ಇಂಟರ್ನ್ಯಾಶನಲ್, ಮುಂತಾದ ಸಂಸ್ಥೆಗಳು ಸೇರಿವೆ.
ಈ ಪ್ರತಿಷ್ಠಿತ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಮತ್ತು ತಾಂಜಾನಿಯಾದ ಮಾಜಿ ಅಧ್ಯಕ್ಷ ಜೂಲಿಯಸ್ ನೈರೆರೆ ಅವರಂತಹ ಅನೇಕ ವ್ಯಕ್ತಿಗಳಿಗೆ ನೀಡಲಾಗಿದೆ. ಇತ್ತೀಚಿನ ಪ್ರಶಸ್ತಿ ಪುರಸ್ಕೃತರಲ್ಲಿ ಒಮಾನ್ ಸುಲ್ತಾನ್ ಕಬೂಸ್ ಬಿನ್ ಸೈದ್ ಅಲ್ ಸೈದ್ (2019) ಮತ್ತು ಬಾಂಗ್ಲಾದೇಶದ ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ (2020) ಸೇರಿದ್ದಾರೆ.