ಬೆಳಗಾವಿ: 20 ಕೋಟಿ ರೂ. ದಂಡದಿಂದ ತಪ್ಪಿಸಿಕೊಳ್ಳಲು ಬೆಳಗಾವಿ ಮಹಾನಗರ ಪಾಲಿಕೆ ಕೊನೆಗೂ ಇದೀಗ ದಾರಿಯೊಂದನ್ನು ಕಂಡುಕೊಂಡಿದೆ.
ಈ ಮೂಲಕ ಭಾರಿ ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಈಗಾಗಲೇ ಬಳಸಿಕೊಂಡ ಭೂಮಿಯನ್ನು ಮಹಾನಗರ ಪಾಲಿಕೆ ನೀಡಲು ಮುಂದಾಗಿದೆ. ಇದಕ್ಕೆ ಭೂಮಿಯ ಮಾಲೀಕರು ಸಹಾ ಒಪ್ಪಿಕೊಂಡಿದ್ದಾರೆ. ಇದರ ಮೂಲಕ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೊಸದೊಂದು ಪಾಠವನ್ನು ಈಗ ಕಲಿತಿದ್ದಾರೆ. ಈ ಪ್ರಕರಣದ ಮೂಲಕ ಭವಿಷ್ಯದಲ್ಲಿ ಮಹಾನಗರ ಪಾಲಿಕೆ ಇಂಥ ತಪ್ಪನ್ನು ಮಾಡದಂತೆ ಪ್ರಕರಣ ಎಚ್ಚರಿಕೆಯನ್ನು ಸಹ ರವಾನಿಸಿದೆ.
ಧಾರವಾಡ ಹೈಕೋರ್ಟ್ನಲ್ಲಿ ಈ ಬಗ್ಗೆ ಬುಧವಾರ ನಡೆದ ವಿಚಾರಣೆ ವೇಳೆ ಎರಡೂ ಕಡೆಯ ಕಕ್ಷಿದಾರರು ಒಂದು ಸರ್ವಸಮ್ಮತವಾದ ನಿರ್ಧಾರಕ್ಕೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಕೊನೆಗೂ ಪ್ರಕರಣ ಸುಖಾಂತ್ಯದತ್ತ ಸಾಗುತ್ತಿದೆ. ಆರ್ಥಿಕವಾಗಿ ನಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆ ಪಾಲಿಗೆ ಇದೊಂದು ಆಶಾದಾಯಕ ಬೆಳವಣಿಗೆಯೆ ಸರಿ.
ಬೆಳಗಾವಿ ಮಹಾನಗರದಲ್ಲಿ ನಡೆದ ಈ ವಿದ್ಯಮಾನ ಕಳೆದೊಂದು ತಿಂಗಳ ಕಾಲ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದರಲ್ಲೂ ಮಹಾನಗರ ಪಾಲಿಕೆ ತೀವ್ರ ಮುಖಭಂಗ ಎದುರಿಸುವ ಸನ್ನಿವೇಶ ಸೃಷ್ಟಿಯಾಗಿತ್ತು.
ಈಗಾಗಲೇ ನ್ಯಾಯಾಲಯದ ಮುಂದೆ ಬಂದಿದ್ದ ಈ ವ್ಯಾಜ್ಯ ಗುರುವಾರ ನಿಗದಿಯಾಗಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ ವಿಷಯ ಎತ್ತಿಕೊಂಡ ನ್ಯಾಯಮೂರ್ತಿಗಳು ಎರಡೂ ಕಡೆಯಿಂದ ದೃಢವಾದ ನಿರ್ಧಾರ ಬಯಸಿದ್ದರು. ಮುಂದಿನ ವಾರ ಇದರ ಅಂತಿಮ ತೀರ್ಪು ಕಾಯ್ದಿರಿಸಿದರು. ಸದ್ಯ ಎರಡೂ ಕಡೆಯಿಂದ ವಾದ- ಪ್ರತಿವಾದಗಳು ಮುಗಿದಿವೆ. ತೀರ್ಪು ಮಾತ್ರ ಬಾಕಿ ಇದೆ. ಅಲ್ಲಿಯವರೆಗೂ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಜನತೆ ನ್ಯಾಯಾಲಯ ಏನು ತೀರ್ಪು ನೀಡಬಹುದು ಎಂದು ಕಾತರದಿಂದ ಕಾಯುವಂತಾಗಿದೆ.
ಬೆಳಗಾವಿ ನಗರದ ಎಸ್ಪಿಎಂ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿ.ಬಿ. ರಸ್ತೆವರೆಗೆ ರಸ್ತೆಯನ್ನು ದ್ವಿಮುಖ ರಸ್ತೆ ನಿರ್ಮಾಣಕ್ಕಾಗಿ 2021ರಲ್ಲಿ 23 ಗುಂಟೆ ಜಾಗ ಬಳಸಿಕೊಳ್ಳಲಾಗಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆಗೂ ಮುನ್ನವೇ ಕಾಮಗಾರಿ ಮಾಡಲಾಗಿದೆ. ಬಳಿಕ ದರ ನಿಗದಿ ಮಾಡಲಾಗಿದೆ. ಇದು ವಿವಾದದ ಕೇಂದ್ರ ಬಿಂದುವಾಗಿ ಗುರುತಿಸಲ್ಪಟ್ಟಿತ್ತು. ಈಗ ಪರಿಹಾರ ನೀಡಿ ಸ್ವಾಧೀನ ಪ್ರಕ್ರಿಯೆ ಮುಗಿಸಬೇಕಾಗಿದೆ.
ಭೂ ಮಾಲೀಕ ಬಾಳಾಸಾಹೇಬ ಪಾಟೀಲ ಅವರಿಗೆ ಪ್ರತಿ ಚದರ ಅಡಿಗೆ 23,500 ₹ ಪರಿಹಾರ ಕೊಡಬೇಕು ಎಂದು ಆಗಿನ ಭೂಸ್ವಾಧೀನ ಅಧಿಕಾರಿ ಭೂಮಿಯ ದರವನ್ನು ನಿಗದಿ ಮಾಡಿದ್ದರು. ಅದರ ಪ್ರಕಾರ ಸುಮಾರು ₹20 ಕೋಟಿ ಕೊಡಬೇಕಾಗಿತ್ತು. ಆದರೆ ಈ ಎಲ್ಲಾ ಬೆಳವಣಿಗೆಗಳು ಪಾಲಿಕೆ ಆಡಳಿತ ಮಂಡಳಿ ಇಲ್ಲದ ಸಂದರ್ಭದಲ್ಲಿ ಹಾಗೂ ಆಡಳಿತಾಧಿಕಾರಿ ನೇತೃತ್ವದಲ್ಲಿ ನಡೆದಿವೆ. ಹೀಗಾಗಿ, ಪರಿಹಾರ ಮೊತ್ತದ ಕುರಿತು ಬೆಳಗಾವಿ ಮಹಾನಗರದಲ್ಲಿ ಪರ- ವಿರೋಧ ಚರ್ಚೆಗಳು ಶುರುವಾದವು. ಈ ನಡುವೆ ಭೂಮಿಯ ಮಾಲೀಕ ಬಾಳಾಸಾಹೇಬ ಪಾಟೀಲ ಅವರು ಧಾರವಾಡದ ನ್ಯಾಯಾಲಯದ ಕಟ್ಟೆ ಹತ್ತಿದ್ದರು. ಅಧಿಕಾರಿಗಳೇ ಒಪ್ಪಿಕೊಂಡಿದ್ದರಿಂದ ₹20 ಕೋಟಿ ಪರಿಹಾರ ಕೊಡಬೇಕಾಗುತ್ತದೆ ಎಂದು
ಹೈಕೋರ್ಟ್ ಪೀಠ ಆದೇಶ ನೀಡಿತ್ತು. ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದ
ಪಾಲಿಕೆ ಅಧಿಕಾರಿಗಳು, ಬುಧವಾರ
ಪೀಠದ ಮುಂದೆ ಹಾಜರಾದರು. ರಸ್ತೆಗೆ ಬಳಸಿಕೊಂಡ ಭೂಮಿಯನ್ನು ಮರಳಿ ಅದರ ಮಾಲೀಕರಿಗೇ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದಕ್ಕೆ ಭೂ ಮಾಲೀಕರೂ ಸಹಾ ಸಮ್ಮತಿ ಸೂಚಿಸಿದ್ದಾರೆ.
ಇದೀಗ ಇನ್ನು ಮುಂದೆ
ಕಾಮಗಾರಿ ಮಾಡಲಾದ ಜಾಗವನ್ನು ಮರಳಿ ಮಾಲೀಕರಿಗೆ ನೀಡಬೇಕೆಂದರೂ ಪಾಲಿಕೆ ಸಭೆಯಲ್ಲಿ ಚರ್ಚಿಸಬೇಕೆ ಬೇಡವೇ ಎಂಬ ಸವಾಲು ಸಹಾ ಈಗ ತಲೆದೋರಿದೆ.
ಇದೇ ವಿಷಯವಾಗಿ ಕಳೆದ ತಿಂಗಳಷ್ಟೇ ಮಹಾನಗರ ಪಾಲಿಕೆ ವಿಶೇಷ ಸಭೆಯನ್ನು ಕರೆದು ಸುದೀರ್ಘವಾಗಿ ಚರ್ಚಿಸಲಾಗಿದೆ.
ಭೂ ಸ್ವಾಧೀನ ಪ್ರಕ್ರಿಯೆ ಮುಗಿಸದೇ ಜಮೀನು ಬಳಸಿ, ರಸ್ತೆ ಮಾಡಲು ಹೇಗೆ ಸಾಧ್ಯ? ಇದೊಂದು ದರೋಡೆಯೇ ಸರಿ ಎಂದು ಹೈಕೋರ್ಟ್ನ ಧಾರವಾಡ ಪೀಠ ಬೆಳಗಾವಿ ಮಹಾನಗರ ಪಾಲಿಕೆಗೆ ಚಾಟಿ ಬೀಸಿದೆ. ಬುಧವಾರ ಪ್ರಕರಣ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಪಾಲಿಕೆ ಅಧಿಕಾರಿಗಳ ನಡೆಯನ್ನು ಇದೊಂದು ದರೋಡೆ ಎಂದರು. ಕೇಳಿದಷ್ಟು ಪರಿಹಾರ ಕೊಡಿ, ಇಲ್ಲವೇ ಜಾಗ ಮರಳಿ ಕೊಡಿ, ಆದ ನಷ್ಟ ಭರಿಸಿಕೊಡಿ. ಇದಕ್ಕೆ ಸಂಬಂಧಿಸಿದಂತೆ ಪ್ರತಿಜ್ಞಾ ಪತ್ರ ಬರೆದುಕೊಡಿ ಎಂದು ಸೂಚಿಸಿದರು. ಬೆಳಗಾವಿ ಮಹಾನಗರ ಪಾಲಿಕೆ ಪರವಾಗಿ ಚೈತನ್ಯ ಮುನವಳ್ಳಿ ಹಾಗೂ ಭೂ ಮಾಲೀಕರ ಪರವಾಗಿ ಕೆ.ಎಲ್. ಪಾಟೀಲ ಅವರು ವಕಾಲತು ವಹಿಸಿದ್ದರು.
ಭೂ ಸ್ವಾಧೀನ ಕೈಗೊಳ್ಳುವಾಗ, ಕಾಮಗಾರಿ ವೇಳೆ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚರಿಕೆ ವಹಿಸಲೇಬೇಕು. ಇಲ್ಲದಿದ್ದರೆ ಇಂಥ ಸಮಸ್ಯೆಗಳಲ್ಲಿ ಸಿಕ್ಕಿಕೊಳ್ಳಬೇಕಾಗುತ್ತದೆ ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಸರಕಾರದ ಅಧಿಕಾರಿಗಳು ಇನ್ನು ಮುಂದೆ ಜಾಗ್ರತಿ ವಹಿಸಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಧಾರವಾಡ ನ್ಯಾಯಾಲಯದ ಆದೇಶವನ್ನು ಚಾಚು ತಪ್ಪದೆ ಪಾಲಿಸಬೇಕಾಗುತ್ತದೆ. ಅದೇ ಜಾಗವನ್ನು ಮತ್ತೊಮ್ಮೆ ನಿಯಮಾನುಸಾರ ಸ್ವಾಧೀನ
ಮಾಡಿಕೊಂಡು ಪರಿಹಾರ ನೀಡುವಂತಾಗಬೇಕು.
ಈಗ ಮಾಡಲಾದ 80 ಅಡಿ ಅಗಲದ ರಸ್ತೆ ಅಗೆದು, ಮೊದಲಿನಿಂತೆ 30 ಅಡಿಗೆ ಸೀಮಿತ ಮಾಡಬೇಕು. ಬಾಳಾಸಾಹೇಬ ಪಾಟೀಲ ಅವರ ಜಾಗದ ಹೊರತಾಗಿ ಬಲಬದಿಯಲ್ಲಿ ಇರುವ ಜಾಗ ಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ.
ಈ ಸಂಬಂಧ ಬೆಳಗಾವಿ ನಗರದಲ್ಲಿ ಮುಖ್ಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆದಿದ್ದು ಭೂಮಿ ಕಳೆದುಕೊಂಡ ಭೂಮಾಲೀಕರಿಗೆ ಪರಿಹಾರ ಕಡ್ಡಾಯವಾಗಿ ಕೊಡಲೇಬೇಕು ಎಂದು ಶಾಸಕ ಅಭಯ ಪಾಟೀಲ ಹಾಗೂ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರು ಇದಕ್ಕೆ ಪ್ರತಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಇಷ್ಟೊಂದು ಹಣವನ್ನು ಕೊಡಲು ಅಸಾಧ್ಯವಾಗಿದೆ. ಇದನ್ನು ಪ್ರಶ್ನಿಸಿ ಮತ್ತೆ ನ್ಯಾಯಾಲಯದ ಮೊರೆಹೋಗಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗುವುದು ಎಂದು ಎಂದು ಹೇಳಿದ್ದರು.
ಆದರೆ ಗುರುವಾರ ನ್ಯಾಯಾಲಯ ನೀಡಿರುವ ಸೂಚನೆ ಪ್ರಕಾರ ಒಟ್ಟಾರೆ ಬೆಳಗಾವಿ ಮಹಾನಗರದಲ್ಲಿ ಕಂಡು ಬಂದ ದೊಡ್ಡ ಸಮಸ್ಯೆಗೆ ತಾರ್ಕಿಕವಾದ ಪರಿಹಾರ ದೊರಕಿದಂತಾಗಿದೆ. ಈ ದಿಸೆಯಲ್ಲಿ ಮಹಾನಗರ ಪಾಲಿಕೆ ಈಗ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ. ಜೊತೆಗೆ ಧಾರವಾಡ ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎನ್ನುವುದು ಸಹಾ ಕುತೂಹಲದ ಕೇಂದ್ರ ಬಿಂದುವಾಗಿದೆ.