ತುಮಕೂರು : ಅವಿವಾಹಿತರು ಹಾಗೂ ಅಕ್ರಮ ಸಂಬಂಧದಿಂದ ಗರ್ಭ ಧರಿಸಿದ ಮಹಿಳೆಯರನ್ನು ಪತ್ತೆಹಚ್ಚಿ ಅವರು ಜನ್ಮ ನೀಡುವ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗೆ ಹಣಕ್ಕೆ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಏಳು ಜನರನ್ನು ಬಂಧಿಸಿ ಐದು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.
ಕುಣಿಗಲ್ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸಿಂಗ್ ಕಾಲೇಜಿನ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದ ತುಮಕೂರಿನ ಅಶೋಕ್ ನಗರದ ಎರಡನೇ ಕ್ರಾಸ್ ನಿವಾಸಿ ಮಹೇಶ್, ಹುಳಿಯೂರಿನ ಫಾರ್ಮಸಿಸ್ಟ್ ಮೆಹಬೂಬ್ ಷರೀಫ್, ಜಾತ್ರೆಗಳಲ್ಲಿ ಟ್ಯಾಟೂ ಬರೆಯುತ್ತಿದ್ದ ರಾಮಕೃಷ್ಣ, ತುಮಕೂರಿನ ಭಾರತಿ ನಗರದ ಹನುಮಂತರಾಜು, ನಾಗಮಂಗಲ ತಾಲೂಕು ಬೆಳ್ಳೂರಿನ ಮುಬಾರಕ್ ಪಾಷಾ, ಮಧುಗಿರಿ ತಾಲೂಕು ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಟಾಫ್ ನರ್ಸ್ ಆಗಿರುವ ಪೂರ್ಣಿಮಾ, ಶಿರಾ ಜ್ಯೋತಿನಗರದ ಹಂಗಾಮಿ ನರ್ಸ್ ಸೌಜನ್ಯ ಬಂಧಿತರು. ಮಕ್ಕಳನ್ನು ಎರಡರಿಂದ ಮೂರು ಲಕ್ಷ ವರೆಗೆ ಮಾರಾಟ ಮಾಡುತ್ತಿದ್ದರು. ಆರೋಪಿ ಮೆಹಬೂಬ್ ಶರೀಫ್ ಹುಳಿಯೂರಿನಲ್ಲಿ ತನ್ನ ಪತ್ನಿ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾನೆ.