ನವದೆಹಲಿ:
19 ವಿರೋಧ ಪಕ್ಷಗಳು ನೂತನ ಸಂಸತ್ತಿನ ಭವನದ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿದ ನಂತರ ಹೊಸ ಸಂಸತ್ತಿನ ಕಟ್ಟಡದ ಉದ್ಘಾಟನೆ ಕುರಿತಾದ ಗದ್ದಲ ತೀವ್ರಗೊಂಡಿದೆ.
ಆದರೆ ಇದೇ ವೇಳೆ 15 ಪಕ್ಷಗಳು ಮೇ 28 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ), ಶಿವಸೇನೆ (ಏಕನಾಥ್ ಶಿಂಧೆ ಬಣ), ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ), ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್ಡಿಪಿಪಿ), ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ), ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (ಆರ್ಎಲ್ಜೆಪಿ), ಅಪ್ನಾ ದಳ (ಸೋನಿಲಾಲ್), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ), ತಮಿಳು ಮಾನಿಲ ಕಾಂಗ್ರೆಸ್, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ), ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್ಯು), ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್), ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (YSRCP), ತೆಲುಗು ದೇಶಂ ಪಕ್ಷ (TDP), ಶಿರೋಮಣಿ ಅಕಾಲಿದಳ (SAD), ಮತ್ತು ಬಿಜು ಜನತಾ ದಳ (BJD). ಪಕ್ಷಗಳು ಪಾಲ್ಗೊಳ್ಳಲಿವೆ. ದೇವನಾಥನ್ ಯಾದವ ಅವರು ಸ್ಥಾಪಿಸಿರುವ ತಮಿಳುನಾಡು ಮೂಲದ ಭಾರತೀಯ ಮಕ್ಕಳ್ ಕಲ್ವಿ ಮುನ್ನೇತ್ರ ಕಳಗಂ (ಐಎಂಕೆಎಂಕೆ) ಕೂಡ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಜಗನ್ಮೋಹನ್ ರೆಡ್ಡಿ ಅವರ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸಹ ಪಾಲ್ಗೊಳ್ಳುವುದಾಗಿ ಹೇಳಿದೆ.
ಬುಧವಾರ, ಕಾಂಗ್ರೆಸ್, ಎಎಪಿ ಮತ್ತು ಟಿಎಂಸಿ ಸೇರಿದಂತೆ 19 ವಿರೋಧ ರಾಜಕೀಯ ಪಕ್ಷಗಳು ಉದ್ಘಾಟನೆ ಬಹಿಷ್ಕರಿಸುವುದಾಗಿ ಜಂಟಿ ಹೇಳಿಕೆಯನ್ನು ನೀಡಿದ್ದು, ಪ್ರಧಾನ ಕಾರಣವೆಂದರೆ ಹೊಸ ಸಂಸತ್ತಿನ ಕಟ್ಟಡವನ್ನು ರಾಷ್ಟ್ರಪತಿ ದ್ರೌಪದಿ ಮರ್ಮು ಬದಲು ಪ್ರಧಾನಿ ಮೋದಿ ಅವರು ಉದ್ಘಾಟಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿವೆ.
ವಿರೋಧ ಪಕ್ಷಗಳ ನಡೆಯನ್ನು ಎನ್ಡಿಎ ಖಂಡಿಸಿದೆ, ಕಳೆದ ಒಂಬತ್ತು ವರ್ಷಗಳಲ್ಲಿ ಅವರ ನಿರ್ಧಾರಗಳು ಸಂಸತ್ತಿನ ಕಾರ್ಯವಿಧಾನಗಳಿಗೆ ಪದೇ ಪದೇ ಅಗೌರವವನ್ನು ತೋರಿಸಿವೆ ಎಂದು ಅದು ಹೇಳಿದೆ.
ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾಕ್ಕೆ ಮೂರು ರಾಷ್ಟ್ರಗಳ ಪ್ರವಾಸ ಮುಗಿಸಿ ಗುರುವಾರ ದೆಹಲಿಯ ಪಾಲಂ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.