ಪುಣೆ: ಹಾಲಿ ಇರುವ ಮುಂಬೈ- ಬೆಂಗಳೂರು ಹೆದ್ದಾರಿ ಈಗಾಗಲೇ ದಟ್ಟಣೆಯಿಂದ ಕೂಡಿದೆ. ಆದ್ದರಿಂದ ಉಭಯ ನಗರಗಳ ನಡುವೆ ಹೊಸ 14 ಪಥದ ಎಕ್ ಪ್ರೆಸ್ ವೇ ನಿರ್ಮಿಸಲಾಗುವುದು. ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದ್ದು, 6 ತಿಂಗಳಲ್ಲಿ ಕಾಮಗಾರಿ ಆರಂಭ ಆಗುವ ನಿರೀಕ್ಷೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬೈನ ಅಟಲ್ ಸೇತುವೆ ಯಿಂದ ಈ ಹೊಸ ರಸ್ತೆ ಶುರುವಾಗಲಿದ್ದು, ಪುಣೆ ರಿಂಗ್ ರಸ್ತೆ ಮೂಲಕ ಸಾಗುತ್ತದೆ. ಜತೆಗೆ ಛತ್ರಪತಿ ಸಂಭಾಜಿ ನಗರವನ್ನು ಹಾದು ಹೋಗುತ್ತದೆ. ಇದು ಹಾಲಿ ರಸ್ತೆಗೆ ಬದಲಿಯಾಗಲಿದೆ.
ಈ ರಸ್ತೆ ನಿರ್ಮಾಣದಿಂದ ಹಾಲಿ ಮುಂಬೈ-ಪುಣೆ ಎಕ್ಸ್ಪ್ರೆಸ್ ವೇನ ಶೇ.50 ರಷ್ಟು ವಾಹನಗಳು ಹೊಸ ಹೆದ್ದಾರಿಗೆ
ವರ್ಗಾವಣೆಯಾಗಲಿವೆ ಎಂದರು. ಇದರ ಟೆಂಡರ್ ಆಹ್ವಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಮುಂದಿನ 6 ತಿಂಗಳಿನಲ್ಲಿ ಕೆಲಸ ಶುರುವಾಗಲಿದೆ ಎಂದು ಸಚಿವರು ಹೇಳಿದರು.
ಬೆಂಗಳೂರಿನಿಂದ ಮುಂಬೈಗೆ ಸಂಪರ್ಕಿಸಲು 2 ಮಾರ್ಗಗಳಿವೆ. ಒಂದು ಬೆಂಗಳೂರು-ಹುಬ್ಬಳ್ಳಿ- ಬೆಳಗಾವಿ-ಪುಣೆ-ಮುಂಬೈ ಮಾರ್ಗ, ಇದು 986 ಕಿ.ಮೀ. ಉದ್ದದ ಎನ್ ಎಚ್ 48. ಇನ್ನೊಂದು ಮಾರ್ಗ ಬೆಂಗಳೂರು-ತುಮಕೂರು-ಚಿತ್ರದುರ್ಗ-ವಿಜಯನಗರ-ಬಾಗಲಕೋಟೆ ಮೂಲಕ ಹಾಯ್ದು ಮಹಾರಾಷ್ಟ್ರ ಸೇರುತ್ತದೆ. ಇದು 900 ಕಿ.ಮೀ. ಇದೆ.