ಬೆಳಗಾವಿ: ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಟ್ಯಾಂಕಿನ ನೀರು ಸೇವಿಸಿ 12 ಮಕ್ಕಳು ಅಸ್ವಸ್ಥಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಶಾಲೆಯ ಆವರಣದಲ್ಲಿರುವ ಟ್ಯಾಂಕಿಗೆ ಅಪರಿಚಿತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಕೀಟನಾಶಕ ಬೆರೆಸಿರುವುದು ದೃಢವಾಗಿದೆ.
ಶಾಲೆಯಲ್ಲಿ 41 ಮಕ್ಕಳಿದ್ದು ಅಲ್ಲದೆ ಈ ಶಾಲೆಯ ಪಕ್ಕದಲ್ಲೇ 20 ಅಧಿಕ ಮನೆಗಳಿದ್ದು ಅವರು ಈ ಟ್ಯಾಂಕಿನ ನೀರನ್ನೇ ಅವಲಂಬಿಸಿದ್ದರು ಎನ್ನಲಾಗಿದೆ.
ಸೋಮವಾರ ಮುಂಜಾನೆ 6 ಗಂಟೆಯ ಸುಮಾರಿಗೆ ಇದೇ ಟ್ಯಾಂಕಿನ ಮೂಲಕ ನೀರು ಸಂಗ್ರಹ ಮಾಡಲಾಗಿದೆ. ಇದಾದ ಬಳಿಕವಷ್ಟೇ ಇದಕ್ಕೆ ಕೀಟನಾಶಕ ಬೆರಸಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಟ್ಯಾಂಕ್ ನಲ್ಲಿ ಹೆಚ್ಚಿನ ಪ್ರಮಾದಲ್ಲಿ ನೀರು ಇದ್ದುದರಿಂದ ವಿಷದ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ನೀರು ಕುಡಿದ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ. ತ್ವರಿತವಾಗಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಶಾಲೆಗೆ ಆಗಮಿಸಿ ಸೂಕ್ತ ಮುನ್ನಚ್ಚರಿಕೆ ಕ್ರಮ ವಹಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳ ಪಡಿಸಲಾಗಿದೆ.