ಬೆಂಗಳೂರು: ಅನ್ನಭಾಗ್ಯ ಯೋಜನೆಯ ಪಡಿತರ ವಿತರಣೆ ವ್ಯವಸ್ಥೆ ಅಡಿ ಇದೇ ಫೆಬ್ರುವರಿಯಿಂದ ಪ್ರತಿ ಫಲಾನುಭವಿಗಳಿಗೆ 10 ಕೆ.ಜಿ ಅಕ್ಕಿ ಸಿಗಲಿದೆ.
ಗ್ಯಾರಂಟಿ ಯೋಜನೆಯ ಘೋಷಣೆಯಂತೆ ರಾಜ್ಯ ಸರ್ಕಾರ 2023ರ ಜುಲೈನಿಂದ ಫಲಾನುಭವಿಗಳ ಖಾತೆಗೆ ₹170 ಜಮೆ ಮಾಡುವ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ನವೆಂಬರ್, ಡಿಸೆಂಬರ್ ಬಾಕಿಯನ್ನು ಖಾತೆಗೆ ಜಮೆ ಮಾಡಲು ನಿರ್ಧರಿಸಲಾಗಿದ್ದು, ಜನವರಿಯಲ್ಲಿ ನೀಡಬೇಕಿದ್ದ ಹಣಕ್ಕೆ ಬದಲಾಗಿ ಫೆಬ್ರುವರಿ ಪಡಿತರದಲ್ಲಿ 5 ಕೆ.ಜಿ. ಹೆಚ್ಚುವರಿ ಅಕ್ಕಿ ನೀಡುತ್ತಿದೆ. ಅಂದರೆ ಇದೊಂದು ತಿಂಗಳು ಪಡಿತರದಾರರಿಗೆ 15 ಕೆ.ಜಿ. ಅಕ್ಕಿ ದೊರೆಯಲಿದೆ.
ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ‘ಗ್ಯಾರಂಟಿ’ ಭರವಸೆಯಂತೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರತಿಯೊಬ್ಬರಿಗೂ 10 ಕೆ.ಜಿ. ಅಕ್ಕಿ ನೀಡಬೇಕಿತ್ತು. ಆದರೆ, ಅಗತ್ಯ ಪ್ರಮಾಣದ ಅಕ್ಕಿ ಹೊಂದಿಸಲು ಸಾಧ್ಯವಾಗದ ಕಾರಣ ಕೇಂದ್ರ ನೀಡುತ್ತಿರುವ 5 ಕೆ.ಜಿ. ಅಕ್ಕಿಯನ್ನು ಮಾತ್ರ ಪೂರೈಸಿ, ಉಳಿದ 5 ಕೆ.ಜಿ. ಅಕ್ಕಿಯ ಬದಲು ಹಣ ನೀಡಲು ನಿರ್ಧರಿಸಲಾಗಿತ್ತು. ಪ್ರತಿ ಕೆ.ಜಿ.ಗೆ ₹34ರಂತೆ ಲೆಕ್ಕ ಹಾಕಿ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ಪ್ರತಿ ತಿಂಗಳು ₹170 ಜಮೆ ಮಾಡಲಾಗುತ್ತಿತ್ತು.
ಪ್ರತಿ ತಿಂಗಳು ₹190 ಕೋಟಿ ಉಳಿತಾಯ: ಕೇಂದ್ರ ಸರ್ಕಾರ ಕೆ.ಜಿ.ಗೆ ₹22.50 ನಂತೆ ಅಕ್ಕಿ ಸರಬರಾಜು ಮಾಡಲು ಒಪ್ಪಿಗೆ ನೀಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು ₹190 ಕೋಟಿ ಉಳಿತಾಯವಾಗಲಿದೆ. ಒಂದೂವರೆ ವರ್ಷದ ಹಿಂದೆ ಅನ್ನಭಾಗ್ಯ ಯೋಜನೆ ಆರಂಭಿಸಿದಾಗ ₹34 ನೀಡಲು ಸಿದ್ಧವಿದ್ದರೂ, ಅಗತ್ಯ ಅಕ್ಕಿ ದೊರೆತಿರಲಿಲ್ಲ. ಹಾಗಾಗಿ, ಅಷ್ಟೇ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು. ಈಗ ₹22.50 ದರದಂತೆ ಅಕ್ಕಿ ಖರೀದಿಸಿ ಪೂರೈಸುವುದರಿಂದ ರಾಜ್ಯ ಸರ್ಕಾರಕ್ಕೆ ದೊಡ್ಡ ಮೊತ್ತದ ಹಣ ಉಳಿತಾಯವಾಗಲಿದೆ.