ಬೆಳಗಾವಿ : ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿರುವ ಉನ್ನತ ಶಿಕ್ಷಣ ಇಲಾಖೆಯ ‘ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ್’ (ಪಿಎಂ–ಉಷಾ) ಯೋಜನೆಯ ‘ವಿಶ್ವವಿದ್ಯಾಲಯಗಳಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆ’ (ಎಂಇಆರ್ಯು) ಅಡಿ ರಾಜ್ಯದ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಲಾ ₹100 ಕೋಟಿ ಅನುದಾನ ಪಡೆಯಲು ಅರ್ಹತೆ ಪಡೆದಿವೆ.
‘ಪಿಎಂ–ಉಷಾ’ ಯೋಜನೆಗೆ ಅನುಮೋದನೆ ನೀಡುವ ಮಂಡಳಿಯ (ಪಿಎಬಿ) ಸಭೆ ಇತ್ತೀಚೆಗೆ ನಡೆದಿದ್ದು, ಅನುದಾನ ಪಡೆಯಲು ಅರ್ಹತೆ ಪಡೆದಿರುವ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಶನಿವಾರ (ಫೆ. 17) ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ರಾಜ್ಯದ ಎರಡು ವಿಶ್ವವಿದ್ಯಾಲಯಗಳು ಈ ಯೋಜನೆಯಡಿ ದೊಡ್ಡ ಮೊತ್ತದ ಅನುದಾನ ಪಡೆಯಲು ಅರ್ಹ ಆಗಿವೆ.
ಈ ಯೋಜನೆಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ, ‘ವಿಶ್ವವಿದ್ಯಾಲಯಗಳಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನೆ’ (ಎಂಇಆರ್ಯು), ‘ವಿಶ್ವವಿದ್ಯಾಲಯಗಳ ಬಲವರ್ಧನೆಗೆ ಅನುದಾನ’ (ಜಿಎಸ್ಯು) ಮತ್ತು ‘ಹೊಸ ಮಾದರಿಯ ಪದವಿ ಕಾಲೇಜುಗಳು’ (ಎನ್ಎಂಡಿಸಿ) ಈ ಮೂರು ವಿಭಾಗಗಳಲ್ಲಿ ಬಂದ ಪ್ರಸ್ತಾವಗಳನ್ನು ಪರಿಗಣಿಸಿ ಪಿಎಬಿ ಅನುದಾನ ಹಂಚಿಕೆ ಮಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು ₹30 ಸಾವಿರ ಕೋಟಿಯನ್ನು ಈ ಯೋಜನೆಗಳಿಗೆ ಮೀಸಲಿಡಲಾಗಿದೆ. ದೇಶದ 1,472 ವಿಶ್ವವಿದ್ಯಾಲಯಗಳ ಪೈಕಿ ಕೇವಲ 26 ವಿಶ್ವವಿದ್ಯಾಲಯಗಳು ಮಾತ್ರ ತಲಾ ₹100 ಕೋಟಿ ಅನುದಾನ ಪಡೆಯಲು ಆಯ್ಕೆ ಆಗಿವೆ.
ಈ ಯೋಜನೆಯ ‘ವಿಶ್ವವಿದ್ಯಾಲಯಗಳ ಬಲವರ್ಧನೆಗೆ ಅನುದಾನ’ (ಜಿಎಸ್ಯು) ವಿಭಾಗದ ಅಡಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯವು ಅನುದಾನ ಪಡೆಯಲು ಅರ್ಹತೆ ಪಡೆದಿವೆ.
ಕೇವಲ 90 ಪ್ರಸ್ತಾವ: ಹೊಸ ಮಾದರಿಯ ಪದವಿ ಕಾಲೇಜುಗಳು (ಎನ್ಎಂಡಿಸಿ) ವಿಭಾಗದಲ್ಲಿ ಅನುದಾನ ಪಡೆಯಲು 90 ಪ್ರಸ್ತಾವಗಳು ಮಾತ್ರ ಪಿಎಬಿಗೆ ಸಲ್ಲಿಕೆ ಆಗಿದ್ದವು. ಯಾವುದೇ ಉನ್ನತ ಶಿಕ್ಷಣ ಸಂಸ್ಥೆ ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಹೊಸ ಮಾದರಿಯ ಪದವಿ ಕಾಲೇಜುಗಳಿಗೆ ಈ ಯೋಜನೆಯಡಿ ಅನುದಾನ ನೀಡಲಾಗುವುದು ಎಂಬ ಷರತ್ತು ವಿಧಿಸಲಾಗಿತ್ತು. ಸಲ್ಲಿಕೆಯಾಗಿದ್ದ ಪ್ರಸ್ತಾವಗಳೆಲ್ಲ ಈ ಷರತ್ತಿನ ಕಾರಣಕ್ಕೆ ಅನರ್ಹಗೊಂಡಿವೆ. ಹೀಗಾಗಿ, ಈ ವಿಭಾಗದಲ್ಲಿ ಅನುದಾನ ಪಡೆಯಲು ನಿಗದಿಪಡಿಸಿರುವ ಮಾನದಂಡಗಳನ್ನು ಪರಿಷ್ಕರಿಸಲು ಪಿಎಬಿ ನಿರ್ಧರಿಸಿದೆ.