ಮಹಾಕುಂಭ ನಗರ: ಜನವರಿ 29ರ ‘ಮೌನಿ ಅಮವಾಸ್ಯೆ’ ದಿನ ಮಹಾಕುಂಭ ಮೇಳದಲ್ಲಿ ಸುಮಾರು 10 ಕೋಟಿ ಜನರು ‘ಅಮೃತ ಸ್ನಾನ’ ಮಾಡುವ ನಿರೀಕ್ಷೆ ಇದೆ. ಹೀಗಾಗಿ, ಜನಸ್ತೋಮ ಮತ್ತು ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ತಿಳಿಸಿದೆ.
ಎಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ವಿಭಾಗೀಯ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳಿಗೆ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಜನಸಮೂಹ ನಿಯಂತ್ರಣಕ್ಕಾಗಿಯೇ 12ಕಿ.ಮೀ ಉದ್ದದ ಘಾಟ್ ನಿರ್ಮಿಸಲಾಗಿದೆ ಎಂದು ಹೇಳಿದೆ.
ಮಕರ ಸಂಕ್ರಾಂತಿಯಿಂದ ಕುಂಭಮೇಳ ನಡೆಯುವ ಅಷ್ಟೂ ದಿನ ನೀರಿನಲ್ಲಿ ಮಿಂದೇಳುವುದನ್ನು ‘ಪವಿತ್ರ’ ಎಂದು ಭಾವಿಸಲಾಗುತ್ತದೆ. ಆದರೆ ಅಮೃತ ಸ್ನಾನದ (ಶಾಹಿ ಸ್ನಾನ) ದಿನಗಳನ್ನು ವಿಶೇಷವಾದ ದಿನಗಳೆಂದು ಎಂದು ಪರಿಗಣಿಸಲಾಗುತ್ತದೆ. ಫೆ.3ರ ವಸಂತ ಪಂಚಮಿ ದಿನವೂ ‘ಅಮೃತ ಸ್ನಾನ’ ನೆರವೇರಲಿದೆ. ಕೊನೆಯ ‘ಅಮೃತ ಸ್ನಾನ’ ಫೆ.26ರಂದು ನಡೆಯಲಿದೆ.