ಮಂಗಳೂರು : ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ನಿಂದ ಕರೆ ಮಾಡಲಾಗಿದೆ ಎಂದು ತಿಳಿಸಿ, ನಿಮ್ಮ ಮೊಬೈಲ್ ನಂಬರ್ ಅನ್ನು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ, ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಬೆದರಿಸಿ ವ್ಯಕ್ತಿಯೊಬ್ಬರಿಂದ 1.71 ಕೋಟಿ ರೂ. ಹಣ ವಂಚನೆ ಮಾಡಿರುವ ಮಂಗಳೂರಿನ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 11ರಂದು ದೂರುದಾರ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು ತಾನು ಟ್ರಾಯ್ ಪ್ರತಿನಿಧಿ ಎಂದು ಹೇಳಿಕೊಂಡಿದ್ದಾನೆ. ನಿಮ್ಮ ಹೆಸರಿನಲ್ಲಿ ಇನ್ನೊಂದು ಮೊಬೈಲ್ ನಂಬರ್ ನೋಂದಣಿಯಾಗಿದೆ. ಅದನ್ನು ಬಳಸಿಕೊಂಡು ಮುಂಬೈನ ಅಂಧೇರಿ(ಪೂ)ಯಲ್ಲಿ ಹಲವು ಕಾನೂನು ಬಾಹಿರ ಚಟುವಟಿಕೆ ನಡೆದಿವೆ. ಮಾರ್ಕೆಟಿಂಗ್ ನೆಪದಲ್ಲಿ ಆ ಮೊಬೈಲ್ ನಂಬರ್ನಿಂದ ಕರೆ ಮಾಡಿ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ಬಂದಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಕೂಡಲೇ ಅಂಧೇರಿ ಪೂರ್ವ ಠಾಣೆಯನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ನಿಮ್ಮ ಮೊಬೈಲ್ ಸೇವೆಯನ್ನು 2 ಗಂಟೆಗಳಲ್ಲಿ ಕೊನೆಗೊಳಿಸಲಾಗುವುದು ಎಂದು ಆತ ಬೆದರಿಕೆ ಹಾಕಿದ್ದ.
ಬಳಿಕ ದೂರುದಾರರಿಗೆ ತನ್ನನ್ನು ತಾನು ಪ್ರದೀಪ ಸಾವಂತ ಎಂದು ಹೇಳಿಕೊಂಡ ಮತ್ತೊಬ್ಬ ಅಪರಿಚಿತ ವ್ಯಕ್ತಿ ಕರೆ ಮಾಡಿ ಮಾತನಾಡಿದ್ದಾನೆ. ಆತ ನರೇಶ ಗೋಯೆಲ್ ವಂಚನೆ ಪ್ರಕರಣ ಪ್ರಕರಣ ಪ್ರಸ್ತಾಪಿಸಿದ್ದಾನೆ ಆ ಅಕ್ರಮ ಹಣ ವರ್ಗಾವಣೆ ಯೋಜನೆಯಲ್ಲಿ ನೀವು ಭಾಗಿಯಾಗಿದ್ದೀರೆಂದು ಇನ್ನೊಂದು ಎಫ್ಐಆರ್ ದಾಖಲಾಗಿದೆ. ಅಂಧೇರಿಯ ಬ್ಯಾಂಕ್ನಲ್ಲಿ ನಿಮ್ಮ ಹೆಸರಿನಲ್ಲಿ ಖಾತೆ ತೆರೆದು ಅದನ್ನು ವಂಚನೆಗೆ ಬಳಸಲಾಗಿದೆ. ಈ ಖಾತೆಗೆ ಬಳಸಲು ನಿಮ್ಮ ಗುರುತಿನ ಚೀಟಿ ನೀಡಿ ಸಿಮ್ ಖರೀದಿಸಲಾಗಿದೆ. ಈ ಸಿಮ್ ಮೂಲಕ ಅಕ್ರಮ ನಡೆದಿದ್ದು, ಹೀಗಾಗಿ ನಿಮ್ಮನ್ನು ಬಂಧಿಸಲಾಗುತ್ತದೆ ಎಂದು ಕರೆ ಮಾಡಿದಾತ ಹೆದರಿಸಿದ್ದಾನೆ.
ನಂತರ ವೀಡಿಯೊ ಕರೆ ಬಂದಿದೆ. ಅದರಲ್ಲಿ ರಾಹುಲಕುಮಾರ ಎಂಬಾತ ಪೊಲೀಸ್ ಅಧಿಕಾರಿ ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾನೆ ಮತ್ತು ಆಕಾಂಕ್ಷಾ ಎಂಬ ಮಹಿಳೆ ತಾನು ಸಿಬಿಐ ಅಧಿಕಾರಿಯೆಂದು ಬಿಂಬಿಸಿಕೊಂಡಿದ್ದಾಳೆ. ಅವರು ವಾಟ್ಸಾಪ್ ನಲ್ಲಿ ವೀಡಿಯೋ ಕರೆ ಮಾಡಿದ್ದಾರೆ. ಆಕಾಂಕ್ಷಾ ಎಂದು ಹೇಳಿಕೊಂಡ ಈ ಮಹಿಳೆ ಸಿಬಿಐ ಕಚೇರಿಯ ನಕಲಿ ದಾಖಲೆ ಸೃಷ್ಟಿಸಿ ದೂರುದಾರರ ವಾಟ್ಸಾಪ್ ನಂಬರಿಗೆ ಅದನ್ನು ಮೆಸೇಜ್ ಮಾಡಿದ್ದಳು. ಅಲ್ಲದೆ, ನೀವು ಈ ವಂಷನೆ ಹಾಗೂ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಈ ಪ್ರಕರಣದಿಂದ ಹೊರಬರಬೇಕಾದರೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಳು. ಇಲ್ಲದಿದ್ದರೆ ನಿಮ್ಮ ಬಂಧನವಾಗುತ್ತದೆ ಎಂದು ತಿಳಿಸಿದ್ದಳು. ಇದರಿಂದ ಹೆದರಿದ ದೂರುದಾರರು ನವೆಂಬರ್13ರಿಂದ 19ರ ನಡುವೆ ಕರೆ ಮಾಡಿದವರು ಹೇಳಿದ ಖಾತೆಗಳಿಗೆ ಒಟ್ಟು 1.71 ಕೋಟಿ ರೂ.ಹಣ ವರ್ಗಾಯಿಸಿದ್ದರು. ಅವರಿಗೆ ನಂತರವೇ ಇದೊಂದು ವಂಚನೆ ಪ್ರಕರಣವೆಂದು ಗೊತ್ತಾಗಿದೆ. ಈಗ ಅವರು ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.