ಬೆಳಗಾವಿ: ಸಿನಿಮೀಯ ರೀತಿಯಲ್ಲಿ ವ್ಯಕ್ತಿಯನ್ನು ಅಪಹರಿಸಿರುವ ದುಷ್ಕರ್ಮಿಗಳು 5 ಕೋಟಿ ರೂ. ಬೇಡಿಕೆ ಇಟ್ಟಿದ್ದು, ಅಪಹರಣಕಾರರ ಜಾಡು ಹಿಡಿದು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಪಹೃತ ಬಸವರಾಜ್ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದು ವ್ಯವಹಾರಿಕವಾಗಿ ಯಾಶಸ್ವಿಯಾಗಿದ್ದಾರೆ.
ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ಬಸವರಾಜ ನೀಲಪ್ಪ ಅಂಬಿ(48) ಎಂಬ ವ್ಯಕ್ತಿಯನ್ನು ಅಪಹರಿಸಲಾಗಿದೆ. ಬಸವರಾಜ್ ಅವರ ಫೋನ್ ನಿಂದ ಅವರ ಪತ್ನಿ ಶೋಭಾ ಬಸವರಾಜ ಅಂಬಿ ಅವರಿಗೆ ಕರೆ ಮಾಡಿ ₹ 5 ಕೋಟಿ ಕೊಟ್ಟರೆ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗುವದು ಇಲ್ಲದಿದ್ದರೆ ಕೊಂದು ಹಾಕುವದು ಎಂದು ಸೋಮವಾರ ಕರೆ ಮಾಡಿ ಹಣವನ್ನು ನಿಪ್ಪಾಣಿಯಿಂದ ಕೊಲ್ಹಾಪುರ್ ಗೆ ಹೋಗುವ ಬೈ ಪಾಸ್ ರಸ್ತೆಯಲ್ಲಿ ತೆಗೆದುಕೊಂಡು ಬರಲು ತಿಳಿಸಿದ್ದರು.
ಅದರಂತೆ ಶೋಭಾ ಅವರು ಮನೆಯಲ್ಲಿದ್ದ ₹ 10 ಲಕ್ಷ ಮತ್ತು ಇತರರಿಂದ ಸ್ವಲ್ಪ ಜನ ಸಂಗ್ರಹಿಸಿ ತಮ್ಮ ಮಗನಿಂದ ಕಳುಹಿಸಿಕೊಟ್ಟಿದ್ದಾರೆ. ಅವರ ಮಗ ತಮ್ಮೊಂದಿಗೆ ಇತರ 4-5 ಸ್ನೇಹಿತರನ್ನೂ ಕರೆದುಕೊಂಡು ಒಂದು ಕಾರಿನಲ್ಲಿ ಹೋಗಿ ಅಪಹರಣಕಾರರು ಸೂಚಿಸಿದ್ದ ಸ್ಥಳದಲ್ಲಿ ಕಾಯುತ್ತಿದ್ದರು. ಆಗ ಒಂದು ಕಾರಿನಲ್ಲಿ ಬಂದ ಅಪಹರಣಕಾರರು ಬಹಳ ಜನರು ಬಂದಿರುವುದನ್ನೂ ಹಾಗು ಒಂದೇ ಸೂಟ್ ಕೇಸ್ ತಂದಿರುವುದನ್ನೂ ಕಂಡು ಬಹುಷಃ ಒಂದು ಕೋಟಿ ರೂಪಾಯಿ ತಂದಿರದೇ ಕಡಿಮೆ ತಂದಿರಬಹುದೆಂದು ಅಂದಾಜಿಸಿ ಹಾಗೆಯೇ ತೆರಳಿದ್ದಾರೆ.
ಸೋಮವಾರ ಸಂಜೆ ಶೋಭಾ ಅವರಿಗೆ ಪುನಃ ಫೋನ್ ಮಾಡಿ — ನಾವು 5 ಕೋಟಿ ರೂಪಾಯಿ ಕೇಳಿದ್ದೆವು, ನೀವು ಒಂದೇ ಸೂಟ್ ಕೇಸ್ ನಲ್ಲಿ ಹಣ ಕಳುಹಿಸಿದ್ದೀರಿ. ಒಂದು ಸೂಟ್ ಕೇಸ್ ನಲ್ಲಿ ಅಷ್ಟು ಹಣ ಹಿಡಿಯಲು ಸಾಧ್ಯವಿಲ್ಲ. ಅಲ್ಲದೇ ಒಬ್ಬರನ್ನೇ ಕಳುಹಿಸಲು ಸೂಚಿಸಿದ್ದೆವು, ನೀವು 4-5 ಜನರನ್ನು ಕಳುಹಿಸಿದ್ದೀರಿ— ಎಂದು ಹೇಳಿ ಫೋನ್ ಕಟ್ ಮಾಡಿದ್ದರು. ನಂತರ ಸ್ವಲ್ಪ ಹೊತ್ತಿನ ನಂತರ ಪುನಃ ಶೋಭಾ ಅವರಿಗೇ ಕರೆ ಮಾಡಿ ಕೊಲ್ಹಾಪುರ್ ಸಮೀಪ ನಿಪ್ಪಾಣಿ ತಾಲ್ಲೂಕಿನ ಬೇರೊಂದು ಸ್ಥಳಕ್ಕೆ ತಿಳಿಸಿದ ಹಣದೊಂದಿಗೆ ಬರಲು ತಿಳಿಸಿದ್ದರು. ಅವರ ವರ್ತನೆಯಿಂದ ಸಂಶಯಗೊಂಡ ಶೋಭಾ ಅವರು ತಮ್ಮ ಪತಿಯಿರುವಿಕೆಯ ಕುರಿತು ವಿಡಿಯೋ ಕರೆ ಮಾಡಲು ತಿಳಿಸಿದ್ದರು. ಅದರಂತೆ ಅಪಹರಣಕಾರರು ಬಸವರಾಜ್ ತಮ್ಮೊಂದಿಗಿರುವ ವಿಡಿಯೋ ಕರೆ ಮಾಡಿ ತೋರಿಸಿ ಬೇಡಿದ ಹಣ ನೀಡದಿದ್ದರೆ ಬಸವರಾಜ್ ಅವರನ್ನು ಹತ್ಯೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಪತಿ ಬಸವರಾಜ್ ಅಪಹರಣ ಮತ್ತು ಹಣದ ಬೇಡಿಕೆ ಕುರಿತು ಶೋಭಾ ಮಂಗಳವಾರ ಸಂಜೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪತ್ರಕರ್ತರಿಗೆ ಬುಧವಾರ ಮಾಹಿತಿ ನೀಡಿದ ಬೆಳಗಾವಿ ಜಿಲ್ಲೆ ಪೊಲೀವ್ ಮುಖ್ಯಸ್ಥ ಭೀಮಾಶಂಕರ್ ಗುಳೇದ —- ಅಪಹರಣಕಾರರು ಮಾಡಿರುವ ಫೋನ್ ಕರೆಯ ಜಾಡು ಹಿಡಿದು ಅವರ ಬಂಧನಕ್ಕೆ ಮತ್ತು ಬಸವರಾಜ್ ಅವರ ಸುರಕ್ಷಿತ ಬಿಡುಗಡೆಗೆ ಗೋಕಾಕ್ ಮತ್ತು ಚಿಕ್ಕೋಡಿ ಡಿಎಸ್ ಪಿ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿದೆ. ಅಪಹರಣಕಾರರು ಕರ್ನಾಟಕದ ಗಡಿ ತಾಲ್ಲೂಕು ನಿಪ್ಪಾಣಿಯಲ್ಲಿರುವುದು ಗೊತ್ತಾಗಿದೆ. ಶೀಘ್ರ ಅವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ಅಪಹರಣಕಾರರು ಮಾಡಿರುವ ಮೊಬೈಲ್ ಕರೆಯ ಜಾಡು ಹಿಡಿದು ಪೊಲೀಸರು ಬಂಧನಕ್ಕೆ ಜಾಲ ಬೀಸಿದ್ದಾರೆ.