ನವದೆಹಲಿ: 2024-25ನೇ ಮಾರುಕಟ್ಟೆ ಋತುವಿನಲ್ಲಿ (ಅಕ್ಟೋಬರ್ನಿಂದ ಸೆಪ್ಟೆಂಬರ್) ಮಾರ್ಚ್ 5ರ ವರೆಗೆ ದೇಶದ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಒಟ್ಟು ₹15,504 ಕೋಟಿ ಮೊತ್ತವನ್ನು ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಕರ್ನಾಟಕದ ರೈತರಿಗೆ ₹3,365 ಕೋಟಿ ಪಾವತಿಗೆ ಬಾಕಿ ಇದೆ.
ಉತ್ತರ ಪ್ರದೇಶದ ಕಾರ್ಖಾನೆಗಳು ₹4,793 ಕೋಟಿ ಪಾವತಿ ಮಾಡಬೇಕಿದೆ. ಬಾಕಿ ಉಳಿಸಿಕೊಂಡಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ (₹2,949 ಕೋಟಿ) ಮತ್ತು ಗುಜರಾತ್ (₹1,454 ಕೋಟಿ) ಆ ನಂತರದ ಸ್ಥಾನದಲ್ಲಿವೆ.
ಕರ್ನಾಟಕದ ಸಕ್ಕರೆ ಕಾರ್ಖಾನೆಗಳು 2023-24ನೇ ಆರ್ಥಿಕ ವರ್ಷದವರೆಗೆ ರೈತರಿಗೆ ಎಲ್ಲ ಬಾಕಿ ಮೊತ್ತ ಪಾವತಿಸಿವೆ.
ಸಕ್ಕರೆ ಬಾಕಿ ಉಳಿಸಿಕೊಳ್ಳುವುದು ನಿರಂತರ ಪ್ರಕ್ರಿಯೆಯಾಗಿದೆ. ಕಾರ್ಖಾನೆಗಳು ಹಂತ ಹಂತವಾಗಿ ಬಾಕಿ ಮೊತ್ತ ಪಾವತಿಸಲಿವೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ರಾಜ್ಯ ಖಾತೆ ಸಚಿವೆ ನಿಮುಬೇನ್ ಜಯಂತಿಭಾಯ್ ಬಮ್ಯಾನಿಯಾ ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರೈತರಿಗೆ ಸಕಾಲದಲ್ಲಿ ಬಾಕಿ ಮೊತ್ತ ಪಾವತಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಕಬ್ಬಿಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (ಎಫ್ಆರ್ಪಿ) ಹೆಚ್ಚಿಸಿದೆ. ಅವರಿಗೆ ಹೆಚ್ಚಿನ ಲಾಭ ಕಲ್ಪಿಸಲು ಸಕ್ಕರೆ ಬಳಸಿ ಎಥೆನಾಲ್ ತಯಾರಿಕೆಗೆ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
ಸಕ್ಕರೆ ರಫ್ತಿಗೆ ಅನುಮತಿ:
ಬೆಲೆ ಕುಸಿತ ತಡೆಯಲು ಮತ್ತು ರೈತರಿಗೆ ಬಾಕಿ ಮೊತ್ತ ಪಾವತಿಗೆ ಅನುಕೂಲವಾಗುವಂತೆ ಪ್ರಸಕ್ತ ಮಾರುಕಟ್ಟೆ ಋತುವಿನಲ್ಲಿ 10 ಲಕ್ಷ ಟನ್ ಸಕ್ಕರೆ ರಫ್ತಿಗೆ ಸರ್ಕಾರವು ಅನುಮತಿ ನೀಡಿದೆ. ಕನಿಷ್ಠ ಸಕ್ಕರೆ ಮಾರಾಟ ದರವನ್ನು ಕೆ.ಜಿಗೆ ₹31ಕ್ಕೆ ನಿಗದಿಪಡಿಸಿದೆ.
ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ 2023-24ನೇ ಮಾರುಕಟ್ಟೆ ಋತುವಿನಲ್ಲಿ ಸಕ್ಕರೆ ಬಾಕಿ ಪಾವತಿಯಲ್ಲಿ
ಶೇ 99.9ರಷ್ಟು ಗುರಿ ಸಾಧನೆಯಾಗಿದೆ. 2024-25ನೇ ಋತುವಿನಲ್ಲಿ ಶೇ 80ರಷ್ಟು ಬಾಕಿ ಪಾವತಿಸಲಾಗಿದೆ’ ಎಂದು ಸಚಿವೆ ತಿಳಿಸಿದ್ದಾರೆ.
ಉತ್ಪಾದನೆ ಇಳಿಕೆ ನಿರೀಕ್ಷೆ
ದೇಶದಲ್ಲಿ ಕಳೆದ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸಕ್ಕರೆ ಉತ್ಪಾದನೆಯು ಕಡಿಮೆಯಾಗಲಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ಐಎಸ್ಎಂಎ) ಅಂದಾಜಿಸಿದೆ. 264 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ತನ್ನ ಪರಿಷ್ಕೃತ ಅಂದಾಜು ವರದಿಯಲ್ಲಿ ಹೇಳಿದೆ. ಪ್ರಸ್ತುತ ದೇಶದಾದ್ಯಂತ 228 ಕಾರ್ಖಾನೆಗಳು ಕಬ್ಬು ಅರೆಯುವಿಕೆ ಪ್ರಕ್ರಿಯೆ ಆರಂಭಿಸಿದ್ದು ಮಾರ್ಚ್ 10ರ ವರೆಗೆ ಒಟ್ಟು 233.09 ಲಕ್ಷ ಟನ್ ಸಕ್ಕರೆ ಉತ್ಪಾದಿಸಿವೆ.