ಬೆಳಗಾವಿ :ವಿದ್ಯಾರ್ಥಿ ಪಡೆದ ಶಿಕ್ಷಣ ಮತ್ತು ಮುಂದೆ ಪಡೆಯಲಿರುವ ಉದ್ಯೋಗದ ಸೇತುವೆಯಾಗಿ ಇಂಟರ್ನ್ ಶಿಪ್ ಇರಲಿದೆ. ಇದರಲ್ಲಿ ಸರಿಯಾದ ಪ್ರಾಯೋಗಿಕ ತರಬೇತಿ ಪಡೆದವನಿಗೆ ಹೆಚ್ಚಿನ ಉದ್ಯೋಗದ ಅವಕಾಶಗಳಿವೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಶೇಷ ಅಧಿಕಾರಿ ಪ್ರೊ. ಬಿ. ಎಸ್. ನಾವಿ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆ.ಎಲ್.ಎಸ್. ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ “ಪ್ರಧಾನಮಂತ್ರಿ ಉಷಾ (ಮೇರು) ಘಟಕ–9ರ ಅಡಿಯಲ್ಲಿ ಬುಧವಾರದಂದು ಕಾಲೇಜಿನ ಕೆ.ಕೆ. ವೇಣುಗೋಪಾಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಇಂಟರ್ನ್ಶಿಪ್ ಅಥವಾ ಅಪ್ರೆಂಟಿಸ್ಶಿಪ್ ಆಧಾರಿತ ಪದವಿ ಕಾರ್ಯಕ್ರಮ ಕುರಿತಾದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಿಎಂ ಉಷಾ (ಎಂಇಆರ್ ಯು) ಘಟಕದ ಉದ್ದೇಶಗಳು, ರಚನೆ ಮತ್ತು ಅನುಷ್ಠಾನ ಕಾರ್ಯತಂತ್ರಗಳ ಬಗ್ಗೆ ವಿವರಿಸಿದರು, ಇದು ರಚನಾತ್ಮಕ ಇಂಟರ್ನ್ ಶಿಪ್ ಮತ್ತು ಅಪ್ರೆಂಟಿಸ್ಶಿಪಗಳ ಮೂಲಕ ಶೈಕ್ಷಣಿಕ ಮತ್ತು ಉದ್ಯಮದ ನಡುವಿನ ಅಂತರವನ್ನು ನಿವಾರಿಸಲಿದೆ.
ಪ್ರತಿಯೊಬ್ಬ ವಿದ್ಯಾರ್ಥಿಯೂ ವೃತ್ತಿ ಪೂರ್ವ ತರಬೇತಿಯನ್ನು ಪಡೆದುಕೊಳ್ಳಬೇಕು. ಇದು ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇಲ್ಲಿ ಪಡೆದ ಅನುಭವದಿಂದ ವೃತ್ತಿಯಲ್ಲಿ ವಿಶೇಷ ನಾವೀನ್ಯತೆಯನ್ನು ತರಲು ಸಹಾಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವೆಣುಗೋಪಾಲ ಜಾಲಿಹಾಳ ಅವರು ಇಂಟರ್ನ್ ಶಿಪ್ ಲ್ಲಿ ಸಿಗುವ ಪ್ರಾಯೋಗಿಕ ಅನುಭವ ಮತ್ತು ಕೌಶಲ್ಯಗಳು ಹೆಚ್ಚಿನ ಉದ್ಯೋಗಾವಕಾಶಗಗಳನ್ನು ಒದಗಿಸಿಕೊಡುತ್ತದೆ ಎಂದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ವಹಣಾ ವಿಭಾಗದ ಪ್ರೊ. ಬಸವರಾಜ ಕುಡಚಿಮಠ ಅವರು ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿ, ಪರಿಣಾಮಕಾರಿ ಇಂಟರ್ನ್ಶಿಪ್ ಮಾದರಿಗಳ, ಮೌಲ್ಯಮಾಪನ ಕಾರ್ಯವಿಧಾನಗಳ ಮತ್ತು ಉದ್ಯಮದ ಕಾರ್ಯತಂತ್ರಗಳ ಕುರಿತು ಒಳನೋಟಗಳನ್ನು ಒದಗಿಸಿದರು.
ಉಪನ್ಯಾಸಕ ಅಪೇಕ್ಷಾ ಬೈಲಪ್ಪಗೋಳ ನಿರೂಪಿಸಿದರು. ಮಹೇಶ ಪೂಜಾರಿ ವಂದಿಸಿದರು. ವಿದ್ಯಾರ್ಥಿನಿ ಸ್ವಾತಿ ಸುತಾರ ಪ್ರಾರ್ಥಿಸಿದರು,
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ಬೋಧಕವರ್ಗ, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.