ಬೆಳಗಾವಿ: ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿಯ ಮಹಾಂತ ಭವನದಲ್ಲಿ ಮಂಗಳವಾರ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ಪ್ರಯೋಗಗಳ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಕಾಮನ ಬಿಲ್ಲಿನ ಬಣ್ಣಗಳ ಸಂಯೋಜನೆಯ ವಿಜ್ಞಾನ ಪ್ರಯೋಗವನ್ನು ಪ್ರದರ್ಶಿಸುವ ಮೂಲಕ ಗಣ್ಯರು ಉದ್ಘಾಟಿಸಿದರು.
ಉದ್ಘಾಟಕರಾಗಿ ಭಾಗವಹಿಸಿದ್ದ ಕಿತ್ತೂರ ರಾಣಿ ಚನ್ನಮ್ಮ ಶಿಕ್ಷಣ ಮಹಾವಿದ್ಯಾಲಯ, ಬೈಲಹೊಂಗಲದ ಪ್ರಾಧ್ಯಾಪಕ ಡಾ. ಶಶಿಕಲಾ ಕರಡಿಗುದ್ದಿ ಮಾತನಾಡಿ, ವಿಜ್ಞಾನ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ ವಿಜ್ಞಾನದ ನೈಜ ಉದ್ದೇಶಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
2026 ರ ವಿಜ್ಞಾನ ದಿನಾಚರಣೆಯ ಧ್ಯೇಯವಾಕ್ಯವಾದ “ವಿಜ್ಞಾನದಲ್ಲಿ ಮಹಿಳೆ – ವಿಕಸಿತ ಭಾರತಕ್ಕಾಗಿ ವೇಗವರ್ಧಕವಾಗಿ ಕೆಲಸ ಮಾಡುವುದು” ಎಂಬ ವಿಷಯದ ಕುರಿತು ವಿಶ್ಲೇಷಣೆ ನಡೆಸಿದ ಅವರು, ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಹೆಚ್ಚಳವಾಗುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು. ಜೊತೆಗೆ ಪ್ರಶಿಕ್ಷಣಾರ್ಥಿಗಳು ಮೂಢನಂಬಿಕೆಗಳನ್ನು ತೊರೆದು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುತೂಹಲ ಹಾಗೂ ಅವಲೋಕನ ವಿಜ್ಞಾನವನ್ನು ಅರ್ಥೈಸಿಕೊಳ್ಳಲು ಪ್ರಮುಖ ಅಂಶಗಳಾಗಿವೆ ಎಂದು ಹೇಳಿದರು.
ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನದ ಪ್ರಗತಿ ಅಗತ್ಯವಾಗಿದ್ದು, ವಿಜ್ಞಾನದಿಂದಲೇ ದೇಶದ ಅಭಿವೃದ್ಧಿ ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ಮಹಾಂತೇಶ ನಗರ ರಹವಾಸಿಗಳ ಸಂಘದ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸ್ಮಿತಾ ಪಟ್ಟೇದ ಮಾತನಾಡಿ, ವಿಜ್ಞಾನ ಎಲ್ಲ ಕ್ಷೇತ್ರಗಳಲ್ಲಿಯೂ ಅಡಗಿದೆ. ವಿಜ್ಞಾನದಿಂದಲೇ ಸಮಾಜ ಹಾಗೂ ರಾಷ್ಟ್ರದ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಹಾಗೂ ಪ್ರಶ್ನೆ ಕೇಳುವ ಕೌಶಲ್ಯವನ್ನು ಬೆಳೆಸುವ ಮೂಲಕ ವಿಜ್ಞಾನ ಶಿಕ್ಷಕರು ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಪಾಠ ಮಾಡಬೇಕು ಎಂದು ಹೇಳಿದರು.
ಅಗಸ್ತ್ಯ ಫೌಂಡೇಶನ್ ಬೆಳಗಾವಿಯ ಸಂಗಮೇಶ ಅಂಗಡಿ ಮಾತನಾಡಿ, ಮಕ್ಕಳಲ್ಲಿ ಅನ್ವೇಷಣಾ ಮನೋಭಾವ ಬೆಳೆಸಲು ಶಿಕ್ಷಕರು ಪಾಠಗಳನ್ನು ಚಟುವಟಿಕೆ ಹಾಗೂ ಪ್ರಯೋಗಾತ್ಮಕ ವಿಧಾನದಲ್ಲಿ ಬೋಧಿಸುವುದು ಅಗತ್ಯ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ನಿರ್ಮಲಾ ಜಿ. ಬಟ್ಟಲ ಮಾತನಾಡಿ, ಮೂಲ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯಗಳು ಇನ್ನಷ್ಟು ವೇಗವಾಗಿ ನಡೆಯಬೇಕು. ಕುರುಡು ನಂಬಿಕೆಗಳನ್ನು ಸತ್ಯಾಸತ್ಯತೆಗೆ ಓರೆಹಚ್ಚಿ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿಜ್ಞಾನ ಎಲ್ಲರಿಗೂ ಸಂಬಂಧಿಸಿದ್ದು, ಕಲಾ ವಿಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಹ ವಿಜ್ಞಾನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೊತೆಗೆ ನಾವು ಪರಿಸರ ಸ್ನೇಹಿಯಾಗಿದ್ದು ಪ್ರಕೃತಿಯೊಂದಿಗೆ ನಮ್ಮ ಒಡನಾಟ ಹೆಚ್ಚಿಸಿಕೊಳ್ಳಬೇಕು ಎಂದರು.
ಶಿಕ್ಷಕರು ಕೇವಲ ಪಾಠ ಬೋಧನೆಗೆ ಸೀಮಿತವಾಗದೆ ಸಂಶೋಧನಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.
ಪ್ರಶಿಕ್ಷಣಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಪ್ರಯೋಗಗಳನ್ನು ಗಣ್ಯರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾಂತೇಶ ನಗರದ ಜೀವನ ಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಸರಕಾರಿ ಪ್ರೌಢಶಾಲೆ ಹಾಗೂ 24ನೇ ನಂ. ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
ಅತ್ಯುತ್ತಮ ವಿಜ್ಞಾನದ ಮಾಡಲಗಳನ್ನು ತಯಾರಿಸಿದ ಪ್ರಶಿಕ್ಷಣಾರ್ಥಿ ಜ್ಯೋತಿ ಸಿದ್ರಾಮನಿ ಪ್ರಥಮ ,ರುತಿಕಾ ಜಾಲಿಹಾಳ ಮತ್ತು ವಂದನಾ ಕದಮ ದ್ವಿತೀಯ, ಶಿವನಗೌಡ ಪಾಟೀಲ ಮತ್ತು ಯುವರಾಜ ಚವ್ಹಾನ ತೃತೀಯ , ಕೋಮಲ ಸಾಂಬ್ರೆಕರ ಮತ್ತು ಸ್ನೇಹಲ ಭಾರಂಕರ ಸಮಾಧಾನ ಬಹುಮಾನ ಪಡೆದರು.
ಪ್ರಶಿಕ್ಷಣಾರ್ಥಿ ಮೇಘಾ ಗುರವೈನವರ ತಂಡ “ಸಾಗರದ ನೀರು ಕಾದಿ ಆವಿಯಾಗಿ, ಮೇಲೆ ತಂಪಾಗಿ ಚಲಿಸುವುದು ಮೋಡವಾಗಿ” ಎಂಬ ವಿಜ್ಞಾನ ಗೀತೆ ಹಾಡಿ ಎಲ್ಲರ ಮೆಚ್ಚುಗೆ ಪಡೆದರು.
ಕಾರ್ಯಕ್ರಮದ ಸಂಯೋಜಕಿಯಾಗಿ ಡಾ. ಗೀತಾ ದಯಣ್ಣವರ ಕಾರ್ಯನಿರ್ವಹಿಸಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಲಕ್ಷ್ಮಿ ಹುಬ್ಬಳ್ಳಿ ಪ್ರಾರ್ಥಿಸಿದರು. ಪ್ರೊ. ಸೋನಲ್ ಚಿನಿವಾಲ ಸ್ವಾಗತಿಸಿ ಪರಿಚಯಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣಾ ಹಣಬರ ವಂದಿಸಿದರು. ಪೂಜಾ ಕೊಳ್ಳಿ ನಿರೂಪಿಸಿದರು.


