ನವದೆಹಲಿ: ಉಕ್ರೇನ್ ಜೊತೆ ಯುದ್ಧ ಮಾಡುತ್ತಿರುವ ರಷ್ಯಾದಿಂದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ವಿರುದ್ಧ ಸುಂಕವನ್ನು ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ ಕೆಲವೇ ಗಂಟೆಗಳ ನಂತರ, ಭಾರತವು ಸೋಮವಾರ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರ ದ್ವಂದ್ವ ನಿಲುವನ್ನು ಪ್ರಶ್ನಿಸಿದೆ.
ರಷ್ಯಾದಿಂದ ತೈಲ ಆಮದಿನ ಬಗ್ಗೆ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಟೀಕೆಗಳನ್ನು ಖಂಡಿಸಿದ ಭಾರತ, ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟದ ದೇಶಗಳು ರಷ್ಯಾ ಜೊತೆಗೆ ಗಣನೀಯ ಪ್ರಮಾಣದಲ್ಲಿ ವ್ಯಾಪಾರ ಮುಂದುವರಿಸಿದ್ದರೂ ಭಾರತವನ್ನು ಮಾತ್ರ ಟಾರ್ಗೆಟ್ ಮಾಡುವುದು “ನ್ಯಾಯಸಮ್ಮತವಾದುದಲ್ಲ ಮತ್ತು ಅಸಮಂಜಸ” ಎಂದು ಹೇಳಿದೆ.
ರಷ್ಯಾದ ತೈಲವನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಸಲುವಾಗಿ ಭಾರತದ ಮೇಲೆ ಸುಂಕವನ್ನು ಗಣನೀಯವಾಗಿ ಹೆಚ್ಚಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿರುವುದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ(MEA)ವು, “ವಾಸ್ತವವಾಗಿ, ಭಾರತದ ಸಾಂಪ್ರದಾಯಿಕ ಇಂದಿನ ಸರಬರಾಜುಗಳನ್ನು ಯುರೋಪಿನ ಕಡೆಗೆ ತಿರುಗಿಸಿದ ಕಾರಣ ಭಾರತವು ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲು ಪ್ರಾರಂಭಿಸಿತು. ಆ ಸಮಯದಲ್ಲಿ ಅಮೆರಿಕವು ಜಾಗತಿಕ ಇಂಧನ ಮಾರುಕಟ್ಟೆಯ ಸ್ಥಿರತೆಯನ್ನು ಬಲಪಡಿಸಲು ಭಾರತದಿಂದ ಅಂತಹ ಆಮದುಗಳನ್ನು ಸಕ್ರಿಯವಾಗಿ ಪ್ರೋತ್ಸಾಹಿಸಿತು” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಭಾರತೀಯ ಗ್ರಾಹಕರಿಗೆ ಕೈಗೆಟುಕುವ ಮತ್ತು ಊಹಿಸಬಹುದಾದ ಇಂಧನ ಬೆಲೆಗಳನ್ನು ಖಚಿತಪಡಿಸಿಕೊಳ್ಳಲು ರಷ್ಯಾದಿಂದ ಭಾರತದ ಇಂಧನ ಆಮದು ಅತ್ಯಗತ್ಯ ಎಂದು ವಿದೇಶಾಂಗ ಸಚಿವಾಲಯ (MEA) ಒತ್ತಿ ಹೇಳಿದ್ದಾರೆ.
“ಭಾರತದ ಆಮದುಗಳು ಭಾರತೀಯ ಗ್ರಾಹಕರಿಗೆ ಊಹಿಸಬಹುದಾದ ಮತ್ತು ಕೈಗೆಟುಕುವ ಇಂಧನ ಬೆಲೆಗಳನ್ನು ಖಚಿತಪಡಿಸಿಕೊಳ್ಳುವ ಉದ್ದೇಶ ಹೊಂದಿದೆ. ಅವು ಜಾಗತಿಕ ಮಾರುಕಟ್ಟೆ ಪರಿಸ್ಥಿತಿಯಿಂದ ಒತ್ತಾಯಿಸಲ್ಪಟ್ಟ ಅವಶ್ಯಕತೆಯಾಗಿದೆ. ಆದಾಗ್ಯೂ, ಭಾರತವನ್ನು ಟೀಕಿಸುವ ರಾಷ್ಟ್ರಗಳೇ ರಷ್ಯಾದೊಂದಿಗೆ ವ್ಯಾಪಾರದಲ್ಲಿ ತೊಡಗಿಕೊಂಡಿವೆ ಎಂಬುದು ಬಹಿರಂಗವಾಗುತ್ತಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಅಮೆರಿಕ-ಯುರೋಪ್ ಒಕ್ಕೂಟದ ಬೂಟಾಟಿಕೆ ಎತ್ತಿ ತೋರಿಸಿದ ಭಾರತ
2024 ರಲ್ಲಿ ಯುರೋಪಿಯನ್ ಒಕ್ಕೂಟ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರವನ್ನು ಭಾರತದ ವಿದೇಶಾಂಗ ಸಚಿವಾಲಯವು ಉಲ್ಲೇಖಿಸಿದೆ, ಅದು “ಆ ವರ್ಷ ಅಥವಾ ನಂತರದ ದಿನಗಳಲ್ಲಿ ರಷ್ಯಾ ಜೊತೆಗಿನ ಭಾರತದ ಒಟ್ಟು ವ್ಯಾಪಾರಕ್ಕಿಂತ ಯುರೋಪಿಯನ್ ಒಕ್ಕೂಟ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ವ್ಯಾಪಾರ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.
ಉಕ್ರೇನ್ ಜೊತೆಗಿನ ಸಂಘರ್ಷಕ್ಕಾಗಿ ರಷ್ಯಾವನ್ನು ವಿರೋಧಿಸಿದ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟವು ಇಂಧನ ಮತ್ತು ನಿರ್ಣಾಯಕ ಸರಕುಗಳನ್ನು ಒಳಗೊಂಡಂತೆ ರಷ್ಯಾದೊಂದಿಗೆ ವ್ಯಾಪಾರವನ್ನು ಮುಂದುವರೆಸಿದೆ ಎಂದು ವಿದೇಶಾಂಗ ಸಚಿವಾಲಯ ಒತ್ತಿ ಹೇಳಿದೆ. “2024 ರಲ್ಲಿ ಯುರೋಪಿಯನ್ ಒಕ್ಕೂಟವು ರಷ್ಯಾದೊಂದಿಗೆ 67.5 ಶತಕೋಟಿ ಯುರೋದಷ್ಟು ಸರಕುಗಳ ದ್ವಿಪಕ್ಷೀಯ ವ್ಯಾಪಾರವನ್ನು ಹೊಂದಿತ್ತು. ಇದರ ಜೊತೆಗೆ, 2023 ರಲ್ಲಿ 17.2 ಶತಕೋಟಿ ಯುರೋಗಳಷ್ಟು ಅಂದಾಜಿನಷ್ಟು ಸರ್ವಿಸ್ ಟ್ರೇಡ್ ಹೊಂದಿತ್ತು. ಇದು ಆ ವರ್ಷ ಅಥವಾ ನಂತರದ ದಿನಗಳಲ್ಲಿ ಭಾರತವು ರಷ್ಯಾದೊಂದಿಗೆ ನಡೆಸಿದ ಒಟ್ಟು ವ್ಯಾಪಾರಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ವಾಸ್ತವವಾಗಿ, 2024 ರಲ್ಲಿ ಯುರೋಪಿಯನ್ ಎಲ್ಎನ್ಜಿ ಆಮದುಗಳು ದಾಖಲೆಯ 16.5 ಮಿಲಿಯನ್ ಟನ್ಗಳನ್ನು ತಲುಪಿದ್ದು, 2022 ರಲ್ಲಿ 15.21 ಮಿಲಿಯನ್ ಟನ್ಗಳಷ್ಟಿದ್ದ ದಾಖಲೆಯನ್ನು ಇದು ಮೀರಿಸಿದೆ ಎಂದು ಭಾರತ ಹೇಳಿದೆ.
“ಯುರೋಪಿಯನ್-ರಷ್ಯಾ ವ್ಯಾಪಾರವು ಶಕ್ತಿ(energy)ಗೆ ಮಾತ್ರ ಸೀಮಿತವಾಗಿಲ್ಲದೆ, ರಸಗೊಬ್ಬರಗಳು, ಗಣಿಗಾರಿಕೆ ಉತ್ಪನ್ನಗಳು, ರಾಸಾಯನಿಕಗಳು, ಕಬ್ಬಿಣ ಮತ್ತು ಉಕ್ಕು ಮತ್ತು ಯಂತ್ರೋಪಕರಣಗಳು ಹಾಗೂ ಸಾರಿಗೆ ಉಪಕರಣಗಳನ್ನು ಸಹ ಒಳಗೊಂಡಿದೆ” ಎಂದು ಭಾರತದ ವಿದೇಶಾಂಗ ಸಚಿವಾಲಯದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಮೆರಿಕವು ರಷ್ಯಾದಿಂದ ಮಾಡಿಕೊಳ್ಳುತ್ತಿರುವ ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ಪಟ್ಟಿ ಮಾಡಿದ ಭಾರತವು “ಅಮೆರಿಕಕ್ಕೆ ಸಂಬಂಧಿಸಿದಂತೆ, ಅದು ರಷ್ಯಾದಿಂದ ತನ್ನ ಪರಮಾಣು ಉದ್ಯಮಕ್ಕೆ ಬೇಕಾದ ಯುರೇನಿಯಂ ಹೆಕ್ಸಾಫ್ಲೋರೈಡ್, ಅದರ ಇಲೆಕ್ಟ್ರಿಕ್ ಕಾರು ಉದ್ಯಮಕ್ಕೆ ಬೇಕಾದ ಪಲ್ಲಾಡಿಯಮ್, ರಸಗೊಬ್ಬರಗಳು ಮತ್ತು ರಾಸಾಯನಿಕಗಳನ್ನು ಆಮದು ಮಾಡಿಕೊಳ್ಳುವುದನ್ನು ಮುಂದುವರೆಸಿದೆ ಎಂದು ಹೇಳಿದೆ.
ರಷ್ಯಾ ಕಚ್ಚಾ ತೈಲ ಖರೀದಿಸಿವುದನ್ನು ಭಾರತವು ಸಮರ್ಥಿಸಿಕೊಂಡಿದೆ ಮತ್ತು ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟವು ಟಾರ್ಗೆಟ್ ಮಾಡುವುದನ್ನು “ಅಸಮರ್ಥನೀಯ ಮತ್ತು ಅಸಮಂಜಸ” ಎಂದು ಕರೆದಿದೆ. ಜಗತ್ತಿನ ಯಾವುದೇ ಪ್ರಮುಖ ಆರ್ಥಿಕತೆಯಂತೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಅದು ತಿಳಿಸಿದೆ.
ನವದೆಹಲಿಯ ಖಡಕ್ ಹೇಳಿಕೆಗಳು ಸೋಮವಾರ ಮುಂಜಾನೆ ಟ್ರಂಪ್ ಭಾರತದ ಆಮದುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವ ಬೆದರಿಕೆ ಹಾಕಿದ ನಂತರ ಬಂದಿದೆ. “ಭಾರತವು ಅಮೆರಿಕಕ್ಕೆ ಪಾವತಿಸುವ ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ” ಎಂದು ಅಮೆರಿಕ ಅಧ್ಯಕ್ಷ ತಮ್ಮ ಟ್ರೂತ್ ಸೋಶಿಯಲ್ನಲ್ಲಿ ಹೇಳಿದ್ದು, ಅದು ಎಷ್ಟು ಪ್ರಮಾಣ ಎಂದು ನಿರ್ದಿಷ್ಟ ಪಡಿಸದೆ ಹೇಳಿದ್ದಾರೆ.
ಆಗಸ್ಟ್ 7-9 ರೊಳಗೆ ರಷ್ಯಾವು ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದ ಹೊರತು ರಷ್ಯಾದ ತೈಲವನ್ನು ಖರೀದಿಸುವ ದೇಶಗಳ ಮೇಲೆ ಶೇಕಡಾ 100 ರಷ್ಟು ಸುಂಕಗಳನ್ನು ವಿಧಿಸುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಆಗಸ್ಟ್ 7 ರಿಂದ ಅಮೆರಿಕಕ್ಕೆ ಪ್ರವೇಶಿಸುವ ಭಾರತೀಯ ಸರಕುಗಳ ಮೇಲೆ ಶೇಕಡಾ 25 ರಷ್ಟು ಆಮದು ಸುಂಕವನ್ನು ಈಗಾಗಲೇ ಪ್ರಕಟಿಸಿದ್ದಾರೆ.
ಸಾಂಪ್ರದಾಯಿಕವಾಗಿ, ಭಾರತವು ತನ್ನ ಹೆಚ್ಚಿನ ತೈಲವನ್ನು ಮಧ್ಯಪ್ರಾಚ್ಯದಿಂದ ಖರೀದಿಸುತ್ತಿತ್ತು, ಆದರೆ ಫೆಬ್ರವರಿ 2022 ರಲ್ಲಿ ಉಕ್ರೇನ್-ರಷ್ಯಾ ಸಂಘರ್ಷದ ನಂತರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ಹೇರಿದ ನಂತರ ರಷ್ಯಾ ತನ್ನ ತೈಲವನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ ನಂತರ ಭಾರತವು ಅಲ್ಲಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿದೆ.
ರಷ್ಯಾದ ಪ್ರತಿಕ್ರಿಯೆ
ಏತನ್ಮಧ್ಯೆ, “ಸುಂಕ”ಗಳ ಮೂಲಕ ವಿವಿಧ ರಾಷ್ಟ್ರಗಳಿಗೆ ಬೆದರಿಕೆ ಹಾಕಿದ್ದಕ್ಕಾಗಿ ಅಮೆರಿಕವನ್ನು ರಷ್ಯಾ ಟೀಕಿಸಿದೆ. ತನ್ನ ಜಾಗತಿಕ ಶಕ್ತಿ ಕುಸಿಯುತ್ತಿದೆ ಎಂದು ಒಪ್ಪಿಕೊಳ್ಳಲು ಅಮೆರಿಕ ಕಷ್ಟಪಡುತ್ತಿದೆ ಎಂದು ಹೇಳಿದೆ. ರಷ್ಯಾದ ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ, “ಉದಯೋನ್ಮುಖ ಬಹುಧ್ರುವೀಯ ಅಂತಾರಾಷ್ಟ್ರೀಯ ಕ್ರಮದಲ್ಲಿ ಅಮೆರಿಕಕ್ಕೆ ತನ್ನ ಪ್ರಾಬಲ್ಯ ಕಡಿಮೆಯಾಗುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಯಾವುದೇ ಸುಂಕ ಯುದ್ಧಗಳು ಅಥವಾ ನಿರ್ಬಂಧಗಳಿಂದ ಇತಿಹಾಸದ ನೈಸರ್ಗಿಕ ಹಾದಿಯನ್ನು ತಡೆಯಲು ಸಾಧ್ಯವಿಲ್ಲ” ಎಂದು ಅದು ಹೇಳಿದೆ.