ನವದೆಹಲಿ: ಬಿಹಾರದಲ್ಲಿ ವಿಶೇಷ ಆಮೂಲಾಗ್ರ ಪರಿಷ್ಕರಣೆ ಭಾಗವಾಗಿ ಸಿದ್ಧಪಡಿಸಲಾಗುತ್ತಿರುವ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಮತದಾರರನ್ನು ಸೇರಿಸಲು ಆಧಾರ್ ಅನ್ನು ಸಹ ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುವುದು ಎಂದು ಹೇಳುವ ಔಪಚಾರಿಕ ಪ್ರಕಟಣೆ ಹೊರಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡಿದೆ. ಆಧಾರ್ ಕೇವಲ ನಿವಾಸದ ಪುರಾವೆಯಾಗಿದೆಯೇ ಹೊರತು ಪೌರತ್ವದ ಪುರಾವೆಯಲ್ಲ ಎಂದು ತಿಳಿಸಿದೆ.
ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಸ್ತಾಪಿಸಲಾದ 65 ಲಕ್ಷ ಹೆಸರುಗಳಿಗೆ ಸಂಬಂಧಿಸಿದಂತೆ ಮಾತ್ರ ಈ ರೀತಿಯ ನಿರ್ದೇಶನವನ್ನು ಈ ಹಿಂದೆ ನೀಡಲಾಗಿತ್ತು . ಈಗ ಈ ನಿರ್ದೇಶನವನ್ನು ಉಳಿದ ಮತದಾರರಿಗೂ ವಿಸ್ತರಿಸಲಾಗಿದೆ.
ಬಿಹಾರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಚುನಾವಣಾ ಆಯೋಗ ಉಲ್ಲೇಖಿಸಿರುವ ಹನ್ನೊಂದು ಇತರ ಗುರುತಿನ ಚೀಟಿಗಳ ಜೊತೆಗೆ, ಆಧಾರ್ ಅನ್ನು ಹನ್ನೆರಡನೇ ಗುರುತಿನ ಚೀಟಿ ಪುರಾವೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಹೇಳಿದೆ. ಆಧಾರ್ ಕೇವಲ ನಿವಾಸದ ಪುರಾವೆಯಾಗಿದೆಯೇ ಹೊರತು ಪೌರತ್ವದ ಪುರಾವೆಯಲ್ಲ. ಅದನ್ನು ಎಲ್ಲಾ ಪಕ್ಷಕಾರರು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಸಲ್ಲಿಸಲಾಗುತ್ತಿರುವ ಆಧಾರ್ ಕಾರ್ಡ್ಗಳ ನೈಜತೆ ಪರೀಕ್ಷಿಸಲು ಮತ್ತು ಅವುಗಳು ನಕಲಿ ಅಲ್ಲ ಎಂದು ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರವಿದೆ ಎಂದು ನ್ಯಾಯಾಲಯ ತಿಳಿಸಿದೆ.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ : 12ನೇ ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್ ಸ್ವೀಕರಿಸಿ ; ಸುಪ್ರೀಂ ಕೋರ್ಟ್
