ಬಾಲಚಂದ್ರ ಬೆಂಬಲಿಗರಿಗೆ ಜಯಭೇರಿ


 

ಬೆಳಗಾವಿ :
ಮೂಡಲಗಿ ತಾಲೂಕಿನ ಕಲ್ಲೋಳಿ, ನಾಗನೂರ, ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರೇ ಭರ್ಜರಿ ಜಯ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸ್ವ ಗ್ರಾಮದಲ್ಲಿಯೇ ತೀವ್ರ ಮುಖಭಂಗವಾಗಿದ್ದು, ಕೇವಲ ಮೂರು ಸ್ಥಾನಗಳನ್ನು ಪಡೆಯಲು ಮಾತ್ರ ಶಕ್ತರಾಗಿದ್ದಾರೆ. ಈ ಮೂಲಕ ಸ್ವ ಗ್ರಾಮದಲ್ಲಿಯೇ ಸಂಸದ ಕಡಾಡಿ ಅವರಿಗೆ ಗ್ರಾಮಸ್ಥರು ತಕ್ಕ ಪಾಠ ಕಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲ್ಲೋಳಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಂಸದ ಈರಣ್ಣ ಕಡಾಡಿ ಅವರು ಚುನಾವಣೆಯನ್ನು ಹೇಗಾದರೂ ಮಾಡಿ ಅವಿರೋಧವಾಗಿ ಆಯ್ಕೆ ಮಾಡಲು ಪ್ರಯತ್ನಿಸಿದಾದರೂ ಕಡೆ ಗಳಿಗೆಯಲ್ಲಿ ಪಕ್ಷದಿಂದ ಬಿ ಫಾರ್ಮ್ ಪಡೆದು ಎಲ್ಲ ಸ್ಥಾನಗಳಿಗೆ ಕಡಾಡಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ಪಕ್ಷದ ಟಿಕೆಟ್ ಪಡೆಯುವಲ್ಲಿ ವಂಚಿತರಾಗಿದ್ದ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಬಾಲಚಂದ್ರ ಜಾರಕಿಹೊಳಿ ಅವರ ಭಾವಚಿತ್ರಗಳನ್ನು ಬಳಸಿಕೊಂಡು ಚುನಾವಣೆಗೆ ಸ್ಪರ್ಧಿಸಿದ್ದರು. ಇದರಲ್ಲಿ 16 ಸ್ಥಾನಗಳ ಪೈಕಿ 13 ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸುವ ಮೂಲಕ ಸ್ವ ಗ್ರಾಮದಲ್ಲಿಯೇ ಕಡಾಡಿ ಅವರಿಗೆ ತೀವ್ರ ಮುಖಭಂಗವಾದಂತಾಗಿದೆ.
ನಾಗನೂರ ಪಟ್ಟಣ ಪಂಚಾಯತಿಯಲ್ಲಿ ಒಟ್ಟು 17 ಸ್ಥಾನಗಳಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇಲ್ಲಿ ಬಿಜೆಪಿಯಿಂದ ಬಿ ಫಾರ್ಮ್ ಪಡೆದು ಯಾರೂ ಚುನಾವಣೆಗೆ ಸ್ಪರ್ಧಿಸಿರಲಿಲ್ಲ.

ಸ್ಥಳೀಯವಾಗಿಯೇ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿಗರ ಎರಡು ಗುಂಪಿನ ಮಧ್ಯೆ ಬಿರುಸಿನ ಚುನಾವಣೆ ನಡೆದಿದೆ.
ಇನ್ನು ಅರಭಾವಿ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 6 ಬಿಜೆಪಿಯಿಂದ ಆಯ್ಕೆಯಾಗಿದ್ದರೇ, ಇನ್ನುಳಿದ 10 ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಎಲ್ಲರೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳಾಗಿದ್ದಾರೆ.
ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಅರಭಾವಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಹೆಚ್ಚಿನ ಶಕ್ತಿ ನೀಡಿದ್ದರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸುವ ಮೂಲಕ ಕಡಾಡಿಗೆ ತವರಿನಲ್ಲಿಯೇ ಅವಮಾನ ಅನುಭವಿಸಿದಂತಾಗಿದೆ.

ಸೋಲು-ಗೆಲುವು ಸರ್ವೇಸಾಮಾನ್ಯ. ಇದನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು. ಈ ಚುನಾವಣೆಯಲ್ಲಿ ಗೆದ್ದವರು ಪಟ್ಟಣದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸಬೇಕು. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜನರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಈ ಚುನಾವಣೆಯಲ್ಲಿ ಪಕ್ಷದಿಂದ ಕೆಲವರಿಗೆ ಬಿ ಫಾರ್ಮ್ ಸಿಗದ್ದರಿಂದ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದರು. ಹೀಗಾಗಿ ಪಕ್ಷೇತರರಾಗಿ ಸ್ಪರ್ಧಾ ಕಣಕ್ಕೆ ಧುಮಕಿ ಜಯಶೀಲರಾಗಿದ್ದಾರೆ. ಅಭಿವೃದ್ಧಿ ಕೆಲಸಗಳಲ್ಲಿ ಎಂದಿಗೂ ಪಕ್ಷಪಾತ ಮಾಡಬೇಡಿ. ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಪರ ಕಾರ್ಯಗಳಲ್ಲಿ ತೊಡಗಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.


Leave A Reply

Your email address will not be published.