ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಹಠಾತ್ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (KPCC)ಯ ಪುನರ್ರಚನೆಗೆ ಹೈಕಮಾಂಡ್ ಮುಂದಾಗಿದೆ. ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗುತ್ತಿರುವುದರಿಂದ ಅವರಿಂದ ತೆರವಾಗಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಸ್ಥಾನಕ್ಕೆ ಇದೀಗ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೆಸರು ಮುಂಚೂಣಿಗೆ ಬಂದಿದೆ.
ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನವೇ ಈ ಮಹತ್ವದ ಬೆಳವಣಿಗೆ ನಡೆದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಸತೀಶ ಜಾರಕಿಹೊಳಿ ಅವರಿಗೆ ಎರಡು ಆಯ್ಕೆಗಳನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯ ಸಚಿವ ಸಂಪುಟದಲ್ಲಿ ಮುಂದುವರಿಯುವುದು ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುವುದು—ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಜಾರಕಿಹೊಳಿ ಅವರಿಗೆ ಆಫರ್ ನೀಡಲಾಗಿದೆ. ಇದಕ್ಕೆ ಜಾರಕಿಹೊಳಿ, ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಬಳಿಕವೇ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಮಂಗಳವಾರ ಮಾತನಾಡಿದ್ದ ಸತೀಶ ಜಾರಕಿಹೊಳಿ, “ಪಕ್ಷದ ನಾಯಕರು ನನಗೆ ಯಾವುದೇ ಜವಾಬ್ದಾರಿ ನೀಡಿದರೂ ನಾನು ಅದನ್ನು ಪರಿಶೀಲಿಸುತ್ತೇನೆ ಮತ್ತು ನನ್ನ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸುತ್ತೇನೆ” ಎಂದು ಹೇಳಿಕೆ ನೀಡಿದ್ದರು.
ಉತ್ತರ ಕರ್ನಾಟಕದಲ್ಲಿ ಜಾರಕಿಹೊಳಿ ಪ್ರಭಾವ:
ಜೂನ್ 1, 1962 ರಂದು ಬೆಳಗಾವಿ ಜಿಲ್ಲೆಯಲ್ಲಿ ಜನಿಸಿದ ಸತೀಶ ಜಾರಕಿಹೊಳಿ ಕರ್ನಾಟಕದ ಪ್ರಭಾವಿ ಸಕ್ಕರೆ ನಾಡಿನ ರಾಜಕೀಯ ಕುಟುಂಬದಿಂದ ಬಂದವರು. ಅವರ ಸಹೋದರರಾದ ರಮೇಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರೂ ಸಹ ರಾಜಕಾರಣಿಗಳಾಗಿದ್ದು, ಕ್ರಮವಾಗಿ ಗೋಕಾಕ ಮತ್ತು ಅರಭಾವಿ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ ಹಾಗೂ ಈ ಮೊದಲು ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸತೀಶ ಜಾರಕಿಹೊಳಿ ಅವರು ಉತ್ತರ ಕರ್ನಾಟಕದ ತಳಮಟ್ಟದ ಪ್ರಭಾವಿ ನಾಯಕ. ಸುದೀರ್ಘ ಸಂಘಟನೆ ಹಾಗೂ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ.
‘ಒಬ್ಬರಿಗೆ ಒಂದೇ ಹುದ್ದೆ’ ನಿಯಮದ ಇಕ್ಕಟ್ಟು:
ಮೂಲಗಳ ಪ್ರಕಾರ, ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಸಿದ್ಧವಾಗಿದ್ದರೂ, ಸಚಿವ ಸ್ಥಾನವನ್ನು ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಡಿ.ಕೆ. ಶಿವಕುಮಾರ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಎರಡೂ ಹುದ್ದೆಗಳನ್ನು ಒಟ್ಟಿಗೆ ನಿಭಾಯಿಸಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಆದರೆ, ಕಾಂಗ್ರೆಸ್ ಹೈಕಮಾಂಡ್ ಈ ಬಾರಿ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ಎಂಬ ತತ್ವಕ್ಕೆ ಕಟ್ಟುಬಿದ್ದಿದ್ದು, ಸತೀಶ ಜಾರಕಿಹೊಳಿ ಅವರಿಗೆ ಎರಡು ಹುದ್ದೆ ನೀಡುವ ಮನಸ್ಥಿತಿಯಲ್ಲಿ ಇಲ್ಲ ಎನ್ನಲಾಗಿದೆ. ಕರ್ನಾಟಕದ ರಾಜಕೀಯ ಇತಿಹಾಸವು ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಚುನಾವಣಾ ಗೆಲುವಿನತ್ತ ಯಶಸ್ವಿಯಾಗಿ ಪಕ್ಷದ ಸಂಘಟನೆಯನ್ನು ಮುನ್ನಡೆಸಿದ ನಾಯಕರನ್ನು ಅಂದರೆ ಕೆಪಿಸಿಸಿ ಅಧ್ಯಕ್ಷರನ್ನು ನಂತರ ಮುಖ್ಯಮಂತ್ರಿಗಳಾಗಿ ನೇಮಿಸಿದ ಹಲವಾರು ಉದಾಹರಣೆಗಳಿವೆ. ಹೀಗಾಗಿ ಈ ಅಂಶವು ಕೆಪಿಸಿಸಿ ಹುದ್ದೆಯನ್ನು ರಾಜ್ಯದ ಅಧಿಕಾರ ರಚನೆಯಲ್ಲಿ ಅತ್ಯಂತ ಕಾರ್ಯತಂತ್ರದ ಮಹತ್ವದ ಸ್ಥಾನಗಳಲ್ಲಿ ಒಂದನ್ನಾಗಿ ಮಾಡಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಮಹತ್ವಾಕಾಂಕ್ಷೆಯನ್ನು ಈಗಾಗಲೇ ವ್ಯಕ್ತಪಡಿಸಿರುವ ಸತೀಶ ಜಾರಕಿಹೊಳಿ ಹೈಕಮಾಂಡ್‌ನ ಈ ಆಫರ್ ಅನ್ನು ಒಪ್ಪಿಕೊಳ್ಳುತ್ತಾರಾ ಅಥವಾ ಸಚಿವ ಸ್ಥಾನದಲ್ಲೇ ಮುಂದುವರಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನೊಂದೆಡೆ, ಡಿ.ಕೆ. ಶಿವಕುಮಾರ ಜೂನ್ ಮೊದಲ ವಾರದಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.
