ತಿಪಟೂರು (ತುಮಕೂರು): 'ರಾಜಕೀಯ ವಿಚಾರದಲ್ಲಿ ನಾವು ತಲೆ ಹಾಕುವುದಿಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಠದಿಂದ ಧರ್ಮಧ್ವಜ ನೀಡಿ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಆಶಯದಿಂದ ಆಶೀರ್ವಾದ ಮಾಡಲಾಗಿದೆ' ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದ್ದಾರೆ.
ಗುರುವಾರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಯಕ್ಕೆ ತಕ್ಕಂತೆ ಎಲ್ಲರ ಸೇವೆಯೂ ರಾಜ್ಯಕ್ಕೆ ಸಿಗಲಿ. ಮುಂದಿನ ಎರಡು ವರ್ಷ ಉತ್ತಮ ಸಮಯವಿದೆ. ಡಿ.ಕೆ ಶಿವಕುಮಾರ್ ರೈತರು ಹಾಗೂ ಬಡವರ ನಾಯಕನಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು.
ಮುಂದಿನ ಮುಖ್ಯಮಂತ್ರಿ ಪ್ರಮಾಣ ವಚನ ಕುರಿತು ಪ್ರತಿಕ್ರಿಯಿಸಿದ ಅವರು, 'ಛತ್ರ ಸಿಕ್ಕಾಗ ಮದುವೆಯಾಗಬೇಕು. ಡಾಕ್ಟರ್ ಸಿಕ್ಕಾಗ ಡೆಲಿವರಿ ಮಾಡಿಸಿಕೊಳ್ಳಬೇಕು. ಅದೇ ಶುಭ ಗಳಿಗೆ. ಅವರಿಗೆ ಅನುಕೂಲವಾಗುವ ಸಮಯದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸುತ್ತಾರೆ. ಈ ವಿಷಯದಲ್ಲಿ ನಾವು ಅವರಿಗೆ ಯಾವುದೇ ಸಮಯ ನೀಡಿಲ್ಲ' ಎಂದರು.