ಮಸ್ಕತ್/ನವದೆಹಲಿ: ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ವಾಣಿಜ್ಯ ನೌಕೆಗಳ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ. ಈ ಘಟನೆ ಈಗ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ.
ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ಅಮೆರಿಕದ ಹಿರಿಯ ರಾಜತಾಂತ್ರಿಕನಿಗೆ ಸಮನ್ಸ್ ಜಾರಿ ಮಾಡಿ ಭಾರಿ ಪ್ರತಿಭಟನೆ ದಾಖಲಿಸಿದೆ.
ಬುಧವಾರ ಒಮಾನ್ ಕರಾವಳಿಯಲ್ಲಿ ‘ಎಂ/ಟಿ ಸೆಟ್ಟೆಬೆಲ್ಲೊ’ (M/T Settebello) ಎಂಬ ವಾಣಿಜ್ಯ ತೈಲ ಟ್ಯಾಂಕರ್ ಮೇಲೆ ಅಮೆರಿಕ ಪಡೆಗಳು ದಾಳಿ ನಡೆಸಿ ಅದನ್ನು ನಿಷ್ಕ್ರಿಯಗೊಳಿಸಿವೆ. ಈ ಹಡಗಿನಲ್ಲಿ ಒಟ್ಟು 24 ಭಾರತೀಯ ಸಿಬ್ಬಂದಿ ಇದ್ದರು. ಸಿಬ್ಬಂದ ಪೈಕಿ 21 ಭಾರತೀಯರನ್ನು ಯಶಸ್ವಿಯಾಗಿ ರಕ್ಷಿಸಲಾಗಿದ್ದು, ಇನ್ನುಳಿದ ಮೂವರು ಭಾರತೀಯ ನಾವಿಕರು ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.
ಒಮಾನ್ ಅಧಿಕಾರಿಗಳ ಜೊತೆ ಒಮಾನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಯು ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಅಮೆರಿಕ ಸಮರ್ಥನೆ
ಇರಾನ್‌ನಿಂದ ತೈಲವನ್ನು ಸಾಗಿಸಲು ಯತ್ನಿಸುವ ಮೂಲಕ ಈ ನೌಕೆಯು ಚಾಲ್ತಿಯಲ್ಲಿರುವ ದಿಗ್ಬಂಧನವನ್ನು ಉಲ್ಲಂಘಿಸಿದೆ. ಈ ಹಿನ್ನೆಲೆಯಲ್ಲಿ ಜೂನ್ 9 ರಂದು ರಾತ್ರಿ 11:14 ಕ್ಕೆ ಅಮೆರಿಕ ಪಡೆಗಳು ಸತತ ಎರಡನೇ ದಿನವೂ ತೈಲ ಟ್ಯಾಂಕರ್ ಅನ್ನು ನಿಷ್ಕ್ರಿಯಗೊಳಿಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ‘X’ (ಟ್ವಿಟರ್) ಪೋಸ್ಟ್‌ನಲ್ಲಿ ತಿಳಿಸಿದೆ. ದಾಳಿಯ ಬ್ಲ್ಯಾಕ್ ಅಂಡ್ ವೈಟ್ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದ್ದು, ವಸ್ತುವೊಂದು ಹಡಗಿನ ಹಿಂಭಾಗಕ್ಕೆ ಅಪ್ಪಳಿಸಿ ಭಾರಿ ಸ್ಫೋಟ ಸಂಭವಿಸುವುದು ಮತ್ತು ನಂತರ ಹಡಗಿನಿಂದ ಹೊಗೆ ಹೊರಬರುವುದನ್ನು ಅದರಲ್ಲಿ ಕಾಣಬಹುದಾಗಿದೆ.
ಅಮೆರಿಕ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದ ಭಾರತ
ವಾಣಿಜ್ಯ ನೌಕೆಯ ಮೇಲಿನ ದಾಳಿಯನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಹೆಚ್ಚುವರಿ ಕಾರ್ಯದರ್ಶಿ (ಅಮೆರಿಕ ವಿಭಾಗ) ನಾಗರಾಜ ನಾಯ್ಡು ಅವರು ಭಾರತದಲ್ಲಿನ ಅಮೆರಿಕದ ಪ್ರಭಾರಿ ರಾಯಭಾರಿ (Chargé d’Affaires) ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿ, ಸಚಿವಾಲಯಕ್ಕೆ ಕರೆಸಿಕೊಂಡು ದೇಶದ ಪರವಾಗಿ ಖಡಕ್ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
ಘಟನೆ ಖಂಡಿಸಿದ ವಿದೇಶಾಂಗ ಸಚಿವಾಲಯ
“ವಾಣಿಜ್ಯ ನೌಕೆ ಸೆಟ್ಟೆಬೆಲ್ಲೊ ಮೇಲಿನ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಪ್ರಾದೇಶಿಕ ಸಂಘರ್ಷದ ನೇರ ಪರಿಣಾಮವಾಗಿ ಹಡಗುಗಳ ಮೇಲೆ ಇಂತಹ ದಾಳಿಗಳು ನಡೆಯುತ್ತಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ. ನಾವು ತಕ್ಷಣವೇ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಲು ಕರೆ ನೀಡುತ್ತೇವೆ. ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳು ಮತ್ತು ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸುವುದನ್ನು ನಿಲ್ಲಿಸಬೇಕು ಹಾಗೂ ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ಮುಕ್ತ ಹಡಗು ಸಂಚಾರಕ್ಕೆ ಅವಕಾಶ ನೀಡಬೇಕು” ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.
ಇದಕ್ಕೂ ಮುನ್ನ ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿತ್ತು.
‘ಎಂಟಿ ಮರಿವೆಕ್ಸ್’ ನೌಕೆ ಮೇಲೆ ದಾಳಿ ಮತ್ತು ರಕ್ಷಣೆ
ಇದಕ್ಕೂ ಕೇವಲ ಒಂದು ದಿನದ ಮುಂಚೆ, ಅಂದರೆ ಮಂಗಳವಾರ ಇದೇ ಒಮಾನ್ ಕರಾವಳಿಯಲ್ಲಿ ಮತ್ತೊಂದು ವಾಣಿಜ್ಯ ಟ್ಯಾಂಕರ್ ಹಡಗು ‘ಎಂಟಿ ಮರಿವೆಕ್ಸ್’ (MT Marivex) ಮೇಲೆ ಅಮೆರಿಕ ಪಡೆಗಳು ಕ್ಷಿಪಣಿ ದಾಳಿ ನಡೆಸಿ ಅದನ್ನು ನಿಷ್ಕ್ರಿಯಗೊಳಿಸಿದ್ದವು.
ಈ ಹಡಗಿನಲ್ಲಿದ್ದ ಎಲ್ಲಾ 24 ಸಿಬ್ಬಂದಿ ಭಾರತೀಯರೇ ಆಗಿದ್ದು, ಭಾರತೀಯ ಕೋಸ್ಟ್ ಗಾರ್ಡ್ (ICG) ಒಮಾನ್ ಅಧಿಕಾರಿಗಳೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಸುರಕ್ಷಿತವಾಗಿ ರಕ್ಷಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಜೈಸ್ವಾಲ್ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.
ಅಮೆರಿಕ ಸೇನೆ ಹಡಗನ್ನು ನಿಷ್ಕ್ರಿಯಗೊಳಿಸುವ ಮುನ್ನ ಹಡಗಿನ ಸಿಬ್ಬಂದಿ ಮತ್ತು ಅಮೆರಿಕ ನೌಕಾಪಡೆಯ ನಡುವೆ ಮಾತುಕತೆ ನಡೆದಿತ್ತು ಎಂಬ ಮಾಹಿತಿಯನ್ನೂ ವಿದೇಶಾಂಗ ಇಲಾಖೆ ಖಚಿತಪಡಿಸಿದೆ.
ಸದ್ಯ ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಯುದ್ಧದಂತಹ ವಾತಾವರಣ ಮತ್ತು ವಾಣಿಜ್ಯ ನೌಕೆಗಳ ಮೇಲಿನ ಸರಣಿ ದಾಳಿಗಳು ಅಂತಾರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ಭಾರಿ ಆತಂಕ ಮೂಡಿಸಿದ್ದು, ಭಾರತವು ತನ್ನ ನಾವಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದೆ.