ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಅತಂತ್ರ ವಿಧಾನಸಭೆ ಹಿನ್ನೆಯಲ್ಲಿ ಸರ್ಕಾರ ರಚನೆಯಲ್ಲಿ ಉಂಟಾಗಿರುವ ಬಿಕ್ಕಟ್ಟು ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಒಂದು ವೇಳೆ ಡಿಎಂಕೆ ಅಥವಾ ಎಐಎಡಿಎಂಕೆ ಅಡ್ಡಹಾದಿಯ ಮೂಲಕ ಸರ್ಕಾರ ರಚಿಸಲು ಮುಂದಾದರೆ ತನ್ನೆಲ್ಲಾ 107 ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ರಾಜ್ಯದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಎಚ್ಚರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ.
ಡಿಎಂಕೆ ಮತ್ತು ಎಐಎಡಿಎಂಕೆ ನಾಯಕರ ನಡುವೆ ಎರಡು ಸಭೆಗಳು ನಡೆದಿವೆ ಎಂದು ವರದಿಯಾದ ನಂತರ ನಂತರ ಈ ಬೆಳವಣಿಗೆ ನಡೆದಿದೆ. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಟಿವಿಕೆ 108 ಸ್ಥಾನಗಳನ್ನು ಗೆದ್ದಿದ್ದು, ಆದರೆ ವಿಜಯ ಅವರು ಎರಡು ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ಹೀಗಾಗಿ ಅವರ ಒಂದು ಸ್ಥಾನ ಮಾತ್ರ ಲೆಕ್ಕಕ್ಕೆ ಸಿಗುತ್ತದೆ. ಅಧಿಕಾರ ಹಿಡಿಯಲು ಬೇಕಾದ 118ರ ಮ್ಯಾಜಿಕ್ ಸಂಖ್ಯೆಗೆ 11 ಸ್ಥಾನಗಳ ಕೊರತೆಯಾಗುತ್ತದೆ.
ವಿಜಯ ಅವರನ್ನು ಮುಖ್ಯಮಂತ್ರಿಯಾಗದಂತೆ ತಡೆಯಲು ಡಿಎಂಕೆ ಹಾಗೂ ಎಐಡಿಎಂಕೆ ಪಕ್ಷಗಳು ಮೈತ್ರಿ ರಾಜಕಾರಣ ನಡೆಸಿದರೆ, ಟಿವಿಕೆ ಶಾಸಕರು ರಾಜೀನಾಮೆ ನೀಡಿ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತವೆ. ವಿಜಯ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸುವಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿರುವುದು ಟಿವಿಕೆ ಕಾರ್ಯಕರ್ತರಲ್ಲಿ ಆಕ್ರೋಶ ಮೂಡಿಸಿದೆ.
ಇದಕ್ಕೂ ಮೊದಲು, ರಾಜ್ಯಪಾಲ ಆರ್.ವಿ. ಅರ್ಲೇಕರ ಅವರು ವಿಜಯ ಅವರಿಗೆ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲು ನಿರಾಕರಿಸಿದ್ದು, ಸರ್ಕಾರ ರಚನೆಗೆ ಬೇಕಾದ ಸಂಖ್ಯಾ ಬಲದ ಪಟ್ಟಿ ನೀಡುವಂತೆ ಕೇಳಿದ್ದಾರೆ. ಎರಡು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ಯಪಾಲರನ್ನು ಭೇಟಿಯಾದ ವಿಜಯ ಅವರಿಗೆ 118 ಶಾಸಕರ ಬೆಂಬಲ ಪತ್ರಗಳನ್ನು ನೀಡುವಂತೆ ರಾಜ್ಯಪಾಲರು ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪನೈಯೂರ್‌ನಲ್ಲಿ ನಡೆದ ಮಹತ್ವದ ಸಭೆ
ಗುರುವಾರ ಸಂಜೆ ಚೆನ್ನೈನ ಪನೈಯೂರ್‌ನಲ್ಲಿ ಟಿವಿಕೆ ಶಾಸಕರು ಹಾಗೂ ಪದಾಧಿಕಾರಿಗಳ ತುರ್ತು ಸಭೆ ನಡೆಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ‘ಬುಸ್ಸಿ’ ಎನ್. ಆನಂದ ಅವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಸರ್ಕಾರ ರಚನೆಯ ಬಗ್ಗೆ ಶಾಸಕರು ಆತಂಕ ವ್ಯಕ್ತಪಡಿಸಿದರು.
“ನಮ್ಮ ನಾಯಕ ವಿಜಯ್ ಅವರು ಸರ್ಕಾರ ರಚನೆಗೆ ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಮತ್ತು ರಾಜಕೀಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕಾರ್ಯಕರ್ತರು ಮತ್ತು ಶಾಸಕರು ತಾಳ್ಮೆಯಿಂದಿರಬೇಕು,” ಎಂದು ಪಕ್ಷದ ಮೂಲಗಳು ತಿಳಿಸಿವೆ.
ದ್ರಾವಿಡ ಪಕ್ಷಗಳ ವಿರುದ್ಧ ಆಕ್ರೋಶ
“ತಮಿಳುನಾಡಿನ ಜನತೆ ವಿಜಯ ಅವರ ನಾಯಕತ್ವಕ್ಕೆ ಸ್ಪಷ್ಟವಾದ ಒಪ್ಪಿಗೆ ನೀಡಿದ್ದಾರೆ. ಆದರೆ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ರಾಜಕೀಯ ತಂತ್ರಗಾರಿಕೆಯ ಮೂಲಕ ವಿಜಯ ಅವರನ್ನು ಅಧಿಕಾರದಿಂದ ದೂರ ಇಡಲು ಸಂಚು ರೂಪಿಸುತ್ತಿವೆ ಎಂಬ ಸಂಶಯ ನಮಗಿದೆ. ಅಂತಹ ಯಾವುದೇ ಪ್ರಯತ್ನ ನಡೆದರೆ ನಮ್ಮ ಶಾಸಕರು ಸುಮ್ಮನಿರುವುದಿಲ್ಲ,” ಎಂದು ಟಿವಿಕೆ ಜಿಲ್ಲಾ ಅಧ್ಯಕ್ಷ ಪಾಂಡಿ ತಿಳಿಸಿದ್ದಾರೆ.
ಪ್ರಸ್ತುತ ಕಾಂಗ್ರೆಸ್‌ನ 5 ಶಾಸಕರು ವಿಜಯ ಅವರಿಗೆ ಬೆಂಬಲ ಸೂಚಿಸಿದ್ದರೂ, ಮ್ಯಾಜಿಕ್ ಸಂಖ್ಯೆ ತಲುಪಲು ಇನ್ನೂ 5 ಶಾಸಕರ ಬೆಂಬಲದ ಅವಶ್ಯಕತೆಯಿದೆ. ಈ ನಡುವೆ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳು ಇಡೀ ದೇಶದ ಗಮನ ಸೆಳೆದಿವೆ.
