ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಹುದ್ದೆ ಲಭಿಸುತ್ತದೆ ಎಂಬ ಮಾತು ಕಾಂಗ್ರೆಸ್ ಪಕ್ಷದಲ್ಲಿದೆ. ಬಹುತೇಕ ಹೆಚ್ಚಿನ ಸಂದರ್ಭಗಳಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ನಿಭಾಯಿಸಿಕೊಂಡು ಪಕ್ಷವನ್ನು ಗೆಲ್ಲಿಸಿಕೊಂಡು ಬಂದ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಿರುವ ಉದಾಹರಣೆ ದೊರೆಯುತ್ತದೆ.
ಕರ್ನಾಟಕದಲ್ಲಿ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದರೆ ಬೆಳಗಾವಿಯ ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಿದೆ.
ಡಿ.ಕೆ.ಶಿವಕುಮಾರ್ ಲೋಕಸಭಾ ಚುನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ 2023 ರಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿ ತಿಳಿಸಿತ್ತು. ಲೋಕಸಭಾ ಚುನಾವಣೆ ನಂತರ ಡಿ.ಕೆ. ಶಿವಕುಮಾರ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ಇಳಿಸಲು ಸಿದ್ದರಾಮಯ್ಯ ಬಣ ಪ್ರಯತ್ನ ನಡೆಸಿತ್ತು. ಅಧಿಕಾರ ಹಸ್ತಾಂತರದ ಗೊಂದಲ ಇತ್ಯರ್ಥವಾಗುವವರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದರು.
ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸದಾ ಹಕ್ಕು ಮಂಡಿಸುತ್ತಿದ್ದರು. ಅಧ್ಯಕ್ಷ ಸ್ಥಾನ ನೀಡಿದರೆ ಮಾತ್ರ ಸಚಿವ ಸ್ಥಾನ ತ್ಯಾಗ ಮಾಡುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದರು. 2028 ಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಪದೇ ಪದೇ ಹೇಳಿಕೆ ನೀಡಿದ್ದನ್ನು ಗಮನಿಸಬಹುದು.
ಮೂರು ಅಥವಾ ನಾಲ್ಕು
ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವ ಸಾಧ್ಯತೆ ಕಂಡು ಬಂದಿದೆ. ಲಿಂಗಾಯತ, ಮುಸ್ಲಿಂ, ದಲಿತ, ಹಿಂದುಳಿದ ಸಮುದಾಯಕ್ಕೆ ಆದ್ಯತೆ ಸಿಗಬಹುದು. ಸಿದ್ದರಾಮಯ್ಯ ತ್ಯಾಗಕ್ಕೆ ಪ್ರತಿಯಾಗಿ ಅವರ ಸುಪುತ್ರ, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೈಕಮಾಂಡ್ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆ ಚುನಾವಣೆಗೆ
ಮೂವರು ಅಭ್ಯರ್ಥಿಗಳ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುನರಾಯ್ಕೆಯಾಗಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿದೆ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಖಾನಾಪುರ ಮಾಜಿ ಶಾಸಕಿ ಡಾ.ಅಂಜಲಿ ನಿಂಬಾಳಕರ ಹೆಸರು ಮುಂಚೂಣಿಯಲ್ಲಿದೆ. ಮೂರನೇ ಅಭ್ಯರ್ಥಿಯಾಗಿ ಅನ್ಯ ರಾಜ್ಯದವರಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ.
