ಕಾರವಾರ : ಸಮುದ್ರ ತೀರಕ್ಕೆ ವಿಹಾರಕ್ಕೆ ತೆರಳಿದ್ದ ಇಬ್ಬರು ಯುವಕರು ಆಕಸ್ಮಿಕವಾಗಿ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬುಧವಾರ ಅಪರಾಹ್ನ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ಉತ್ತರ ಪ್ರದೇಶದ ಕಾನ್ಪುರ ಮೂಲದ ಅಫ್ರೋಜ್ (34) ಮತ್ತು ರಿಜ್ವಾನ್ (28) ಎಂದು ಹೇಳಲಾಗಿದೆ. ಮೃತರು ಭಟ್ಕಳದ ಸ್ಥಳೀಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಬುಧವಾರ ಸಂಜೆ 4:00 ಗಂಟೆ ಸುಮಾರಿಗೆ ಒಟ್ಟು ಏಳು ಜನರು ನಸ್ತಾರ್ ಬೀಚ್ ನ ಸಮುದ್ರ ತೀರಕ್ಕೆ ವಿಹಾರಕ್ಕಾಗಿ ತೆರಳಿದ್ದರು. ಈ ಪೈಕಿ ಮೂವರು ದಡದಲ್ಲಿ ಕುಳಿತಿದ್ದರೆ, ಅಫ್ರೋಜ್ ಮತ್ತು ರಿಜ್ವಾನ್ ಸೇರಿದಂತೆ ನಾಲ್ವರು ಅಲೆಗಳ ಸೊಬಗನ್ನು ವೀಕ್ಷಿಸಲು ಸಮೀಪದ ಬಂಡೆಯೊಂದನ್ನು ಏರಿ ಕುಳಿತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ದಿಢೀರ್ ಬಂದು ಅಪ್ಪಳಿಸಿದ ಬೃಹತ್ ಗಾತ್ರದ ಅಲೆಯು ಬಂಡೆಯ ಮೇಲಿದ್ದ ಇಬ್ಬರನ್ನು ಸಮುದ್ರಕ್ಕೆ ಎಳೆದೊಯ್ದಿದೆ ಎನ್ನಲಾಗಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಕೆಲವರು ಅಬ್ಬರಿಸುತ್ತಿದ್ದ ಸಮುದ್ರಕ್ಕೆ ಇಳಿದು ರಕ್ಷಣೆಗೆ ಮುಂದಾದರು. ಆದರೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
