ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಪ್ರಯಾಣಿಕನೊಬ್ಬ ಕಾಲು ಜಾರಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೆ ಸಿಬ್ಬಂದಿ ಎಳೆದು ಪಾರುಮಾಡಿದ ವಿದ್ಯಮಾನ ಭಾನುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಕೊಚ್ಚಿವಲ್ಲಿಯಿಂದ ಗಂಗಾನಗರಕ್ಕೆ ಹೋಗುತ್ತಿದ್ದ ರೈಲು ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ನಂತರ ರೈಲು (ಸಂಖ್ಯೆ 16312) ಬೆಳಿಗ್ಗೆ 07:56 ರ ಸುಮಾರಿಗೆ ನಿಲ್ದಾಣದಿಂದ ಹೊರಟಿದ್ದಾಗ ಮೊಹಮ್ಮದ್ ಗಫೂರ್ (22) ಎಂಬ ಪ್ರಯಾಣಿಕ ಇಳಿಯಲು ಪ್ರಯತ್ನಿಸಿದ್ದಾರೆ. ರೈಲು ಚಲಿಸುತ್ತಿದ್ದುದರಿಂದ ಅವರು ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.
ಇದನ್ನು ಗಮನಿಸಿದ ರೈಲಿಗೆ ಬಾವುಟ ತೋರಿಸುತ್ತಿದ್ದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ ಸಮಯಪ್ರಜ್ಞೆ ಮೆರೆದು, ಕ್ಷಣಾರ್ಧದಲ್ಲೇ ಪ್ರಯಾಣಿಕನನ್ನು ಹೊರಗೆ ಎಳೆದು ಅಪಾಯದಿಂದ ಪಾರು ಮಾಡಿದ್ದಾರೆ. ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದೆ.
ಈ ಘಟನೆ ಮುರುಡೇಶ್ವರ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರೈಲ್ವೆ ಸಿಬ್ಬಂದಿಯ ಧೈರ್ಯ, ಸಮಯಪ್ರಜ್ಞೆ ಮತ್ತು ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.