ಬೆಳಗಾವಿ: ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರಿನಲ್ಲಿ ಹರಿದಾಡಿದ ನಕಲಿ ಹೂಡಿಕೆ ಜಾಹೀರಾತು ನಂಬಿದ ವಯೊವೃದ್ಧರೊಬ್ಬರು 7.38 ಲಕ್ಷ ರೂ. ವಂಚನೆಗೊಳಗಾಗಿದ್ದಾರೆ.
ಬೆಳಗಾವಿಯ ವಂಟಮುರಿ ಕಾಲನಿಯ ಪ್ರಕಾಶ ಗುಬ್ಬಿ (76) ವಂಚನೆಗೊಳಗಾದವರು. ಕೊಲ್ಲಾಪುರ ಮೂಲದ ಆದರ್ಶ ಹಾಗೂ ಬುಲ್ದಾಣಾದ ದಾಮೋದರ ಎನ್ನುವರ ವಿರುದ್ಧ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಕಲಿ ಜಾಹೀರಾತು ಸಿದ್ಧಪಡಿಸಿದ ವಂಚಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಸಿಗುತ್ತದೆ ಎಂದು ನಂಬಿಸಿದ್ದರು. ಜಾಹೀರಾತಿನಲ್ಲಿದ್ದ ಲಿಂಕ್ ಮೇಲೆ ಕ್ಲಿಕ್ ಮಾಡಿದ ಪ್ರಕಾಶ ಅವರು ತಮ್ಮ ವಿವರಗಳನ್ನು ನೋಂದಾಯಿಸಿಕೊಂಡಿದ್ದರು. ಬಳಿಕ ವಂಚಕರು ಸಂಪರ್ಕಿಸಿ ಮೊದಲು ಫೋನ್‌ಪೇ ಮೂಲಕ 16,500 ರೂ. ಪಾವತಿಸಲು ಸೂಚಿಸಿದ್ದಾರೆ. ನಂತರ ಮತ್ತೆ ಕರೆ ಮಾಡಿ, ಹೂಡಿಕೆಗೆ ಲಾಭ ಬಂದಿಲ್ಲ ಎಂದು ಹೇಳಿ ಇನ್ನಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದನ್ನು ನಂಬಿದ ಪ್ರಕಾಶ ಅವರು ಹಂತ ಹಂತವಾಗಿ ಒಟ್ಟು 7.38 ಲಕ್ಷ ರೂ.ಗಳನ್ನು ಆರ್‌ಟಿಜಿಎಸ್ ಮೂಲಕ 2025ರ ನವೆಂಬರ್ ನಲ್ಲಿ ವರ್ಗಾವಣೆ ಮಾಡಿದ್ದಾರೆ. ಆದರೆ, ಈವರೆಗೂ ಯಾವುದೇ ಲಾಭದ ಹಣ ದೊರಕದೇ, ಹೂಡಿಕೆ ಮಾಡಿದ ಹಣವೂ ವಾಪಸು ಸಿಗದ ಹಿನ್ನೆಲೆಯಲ್ಲಿ ತಾವು ವಂಚನೆಗೊಳಗಾಗಿರುವುದು -ತಿಳಿದು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
