ಕೊಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಬದಲಾದ ರಾಜಕೀಯ ಗಾಳಿ: ತೃಣಮೂಲಕ್ಕೆ ಮುಳುವಾಯಿತೇ ‘5-M’ ತಂತ್ರ?
ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಸದ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ ಭಾರತೀಯ ಜನತಾ ಪಾರ್ಟಿ (BJP) 190ರ ಆಸುಪಾಸು ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತದತ್ತ (ಮ್ಯಾಜಿಕ್ ನಂಬರ್ 148) ದಾಪುಗಾಲು ಹಾಕುತ್ತಿದೆ. ಇನ್ನೊಂದೆಡೆ, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) 100ರ ಗಡಿ ದಾಟಲು ಹೆಣಗಾಡುತ್ತಿದೆ.
15 ವರ್ಷಗಳ ಹಿಂದೆ, ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ “ಮಾ, ಮಾತಿ, ಮಾನುಷ್” (ತಾಯಿ, ಮಣ್ಣು, ಜನರು) ಎಂಬ ಮೂರನ್ನು ಘೋಷ ವಾಕ್ಯವಾಗಿಸಿ 34 ವರ್ಷಗಳ ಎಡಪಂಥೀಯ ಆಡಳಿತವನ್ನು ಕೊನೆಗೊಳಿಸಿದರು. ಅಂದಿನಿಂದ, ಈ ಘೋಷಣೆಯು ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್‌ನ ಸತತ ಮೂರು ಗೆಲುವಿನ ಹಿಂದಿನ ಮೂಲಾಧಾರವಾಗಿದೆ. ಆದರೆ 2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಇದು ನಡೆಯಲಿಲ್ಲ. ಇದರ ಬದಲು ಬಿಜೆಪಿಯ ಘೋಷ ವಾಕ್ಯಗಳು ಹಾಗೂ ಅದಕ್ಕಿಂತ ಮುಖ್ಯವಾಗಿ ಈ ರಾಜಕೀಯ ಸ್ಥಿತ್ಯಂತರಕ್ಕೆ ಪ್ರಮುಖವಾಗಿ ಐದು ʼಎಂʼ (M) ಅಂಶಗಳು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ.
ಮಹಿಳಾ ಮತದಾರರು (Mahila Voters)
ದಶಕಗಳಿಂದ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದ ಮಹಿಳಾ ಮತದಾರರು ಈ ಬಾರಿ ವಿಭಜನೆಯಾದಂತೆ ಕಾಣುತ್ತಿದೆ.
ಮಮತಾ ಬ್ಯಾನರ್ಜಿ ‘ಲಕ್ಷ್ಮೀರ್ ಭಂಡಾರ್’ ಮತ್ತು ‘ಕನ್ಯಾಶ್ರೀ’ ಅಂತಹ ಯೋಜನೆಗಳ ಮೂಲಕ ಮಹಿಳೆಯರ ಬೆಂಬಲ ಗಳಿಸಿದ್ದರು. ಆದಾಗ್ಯೂ, 2026 ರ ಈ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೂಡ ಕೇಂದ್ರ ಸರ್ಕಾರದ ಮಹಿಳಾ ಕೇಂದ್ರಿತ ಪ್ರೋತ್ಸಾಹ ಮತ್ತು ಕಲ್ಯಾಣ ಯೋಜನೆಗಳು ಹಾಗೂ ತಾವು ತರಲು ಉದ್ದೇಶಿಸಿರುವ ಮಹಿಳಾ ಕಲ್ಯಾಣ ಯೋಜನೆಗಳ ಬಗ್ಗೆ ಕೇಂದ್ರೀಕರಿಸಿ ಚುನಾವಣಾ ಪ್ರಚಾರ ನಡೆಸಿತು.
ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಮಹಿಳೆ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಚುನಾವಣೆಯಲ್ಲಿ ಪ್ರಮುಖ ಚರ್ಚಾ ವಿಷಯವಾಯಿತು. ಈ ಪ್ರಕರಣದಲ್ಲಿ ಮಮತಾ ಸರ್ಕಾರ ನಡೆದುಕೊಂಡ ರೀತಿ ಮಹಿಳಾ ಮತದಾರರ ಅಸಮಾಧಾನಕ್ಕೆ ಕಾರಣವಾಯಿತು. ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಬಿಜೆಪಿಯು ಮಮತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಇದು ಮಹಿಳಾ ಮತದಾರರ ಮೇಲೆ ಪರಿಣಾಮ ಬೀರಿತು. ಸಂತ್ರಸ್ತೆಯ ತಾಯಿಗೆ ಪಾನಿಹಾತಿಯಿಂದ ಟಿಕೆಟ್ ನೀಡಿದ್ದು ಬಿಜೆಪಿಗೆ ಭಾವನಾತ್ಮಕ ಲಾಭ ತಂದುಕೊಟ್ಟಿದೆ ಎನ್ನಲಾಗುತ್ತಿದೆ.
ಮುಸ್ಲಿಂ ಮತಗಳು (Muslim Votes)
ಬಂಗಾಳದ ಸರಿಸುಮಾರು 27% ರಷ್ಟಿರುವ ಮುಸ್ಲಿಂ ಮತದಾರರು ಕಳೆದ ಕೆಲವರ್ಷಗಳಿಂದ ಸಾಂಪ್ರದಾಯಿಕವಾಗಿ ಟಿಎಂಸಿ ಪರವಾಗಿದ್ದರು.
ಮಾಲ್ಡಾ, ಮುರ್ಷಿದಾಬಾದ್ ಮತ್ತು ಉತ್ತರ ದಿನಾಜ್‌ಪುರದಂತಹ ಜಿಲ್ಲೆಗಳಲ್ಲಿ ಅಭಿವೃದ್ಧಿಯ ಕೊರತೆ ಮತ್ತು ಆಡಳಿತ ವಿರೋಧಿ ಅಲೆಯ ಕಾರಣದಿಂದ ಇವರ ಮತಗಳು ಚದುರಿವೆ.
2021 ರಲ್ಲಿ, ಟಿಎಂಸಿ ಮುಸ್ಲಿಮರು ಶೇಕಡಾ 35 ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 85 ವಿಧಾನಸಭಾ ಸ್ಥಾನಗಳಲ್ಲಿ 75 ಸ್ಥಾನಗಳನ್ನು ಗೆದ್ದಿತ್ತು. ಅಲ್ಲಿ ಅಲ್ಪಸಂಖ್ಯಾತ ಮತಗಳು ಟಿಎಂಸಿ ಪರವಾಗಿ ಬಹುತೇಕ ಏಕಕ್ಷೀಯವಾಗಿ ಕ್ರೋಢೀಕರಣಗೊಂಡಿತ್ತು. ಈ ಸಲದ ಚುನಾವಣೆಯಲ್ಲಿಯೂ ಅಲ್ಪಸಂಖ್ಯಾತ ಕೇಂದ್ರಿತ ಟಿಎಂಸಿ ಪಕ್ಷದ ನಿರೂಪಣೆಗಳನ್ನೇ ಪದೇಪದೇ ಹೈಲೈಟ್ ಮಾಡಿದ ಬಿಜೆಪಿ ಬಹುಸಂಖ್ಯಾತ ಸಮುದಾಯದ ಮತಗಳನ್ನು ತಮ್ಮ ಕಡೆ ವಾಲುವಂತೆ ಮಾಡಿತು.
ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ಸಿನ ಪುನರುತ್ಥಾನದ ಪ್ರಯತ್ನ ಮತ್ತು ಒವೈಸಿ ಅವರ ಎಐಎಂಐಎಂ (AIMIM) ಪಕ್ಷವು ಕೆಲವೇ ಪ್ರಮಾಣದಲ್ಲಿ ಮುಸ್ಲಿಂ ಮತಗಳನ್ನು ವಿಭಜನೆ ಮಾಡಿದರೂ ತುರುಸಿನ ಸ್ಪರ್ಧೆಯಲ್ಲಿ ಬಿಜೆಪಿಗೆ ಪರೋಕ್ಷವಾಗಿ ವರದಾನವಾಯಿತು.
ವಲಸೆ ಕಾರ್ಮಿಕರು (Migrants)
ಈ ಚುನಾವಣೆಯಲ್ಲಿ ವಲಸೆ ಮತದಾರರು ಮತ್ತೊಂದು ಅನಿರೀಕ್ಷಿತ ಚುನಾವಣಾ ಅಂಶವಾಗಿದ್ದಾರೆ. ‘ಸಮಗ್ರ ತೀವ್ರ ಪರಿಷ್ಕರಣೆ’ (SIR) ಅಡಿಯಲ್ಲಿ ನಡೆದ ಮತದಾರರ ಪಟ್ಟಿ ತಿದ್ದುಪಡಿ ಪ್ರಕ್ರಿಯೆಯ ನಂತರ ಮತ ಹಾಕದಿದ್ದರೆ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಡಬಹುದು ಎಂಬ ಆತಂಕದಿಂದ ಹೊರ ರಾಜ್ಯದಲ್ಲಿದ್ದ ಸಾವಿರಾರು ವಲಸೆ ಕಾರ್ಮಿಕರು ಈ ಬಾರಿ ತಮ್ಮೂರಿಗೆ ಮರಳಿ ಮತ ಚಲಾಯಿಸಿರುವುದು ಒಂದು ಅನಿರೀಕ್ಷಿತ ಆದರೆ ಚುನಾವಣೆ ಮೇಲೆ ಪ್ರಭಾವ ಬೀರಿದ ಅಂಶ ಎಂದೇ ಹೇಳಬಹುದು.
ಮತುವಾ ಸಮುದಾಯ (Matua Community)
ಪಶ್ಚಿಮ ಬಂಗಾಳದ ಜನಸಂಖ್ಯೆಯ ಸುಮಾರು 17% ರಷ್ಟಿರುವ ಪರಿಶಿಷ್ಟ ಜಾತಿಯ ಮತುವಾ ಸಮುದಾಯವು ಉತ್ತರ 24 ಪರಗಣ ಮತ್ತು ನಾಡಿಯಾ ಜಿಲ್ಲೆಗಳಲ್ಲಿ ನಿರ್ಣಾಯಕ ಸಮುದಾಯವಾಗಿದೆ. ಕಳೆದ ಚುನಾವಣೆಯಲ್ಲಿ ಮತುವಾ ಸಮುದಾಯವು ಬಿಜೆಪಿ ರಾಜ್ಯದಲ್ಲಿ ವಿಪಕ್ಷದ ಸ್ಥಾನಕ್ಕೆ ಬರಲು ಕಾರಣವಾದ ಪ್ರಮುಖ ಮತಬ್ಯಾಂಕ್ ಆಗಿತ್ತು. ಸಿಎಎ (CAA) ಜಾರಿಯ ಭರವಸೆ ಮತ್ತು ಈ ಸಮುದಾಯದ ಜೊತೆ ಬಿಜೆಪಿಯ ನಿರಂತರ ಸಂಪರ್ಕದಿಂದಾಗಿ ಸಮುದಾಯವು ಈ ಬಾರಿಯೂ ಕೇಸರಿ ಪಕ್ಷದ ಪರವಾಗಿ ಗಟ್ಟಿಯಾಗಿ ನಿಲ್ಲಲು ಕಾರಣವಾಯಿತು.
ಬಿಜೆಪಿಯ ಚುನಾವಣಾ ಯಂತ್ರ ಮತ್ತು ತಳಮಟ್ಟದ ನಿರ್ವಹಣೆ (BJP’s Machinery-Micro-management)
ಟಿಎಂಸಿ ಮತ್ತು ಎಡರಂಗದ ಭದ್ರಕೋಟೆಯಾಗಿದ್ದ ಬಂಗಾಳದಲ್ಲಿ ಬಿಜೆಪಿ ಈ ಬಾರಿ ತನ್ನ ಸಂಘಟನಾ ಶಕ್ತಿಯನ್ನು ಬೂತ್ ಮಟ್ಟದಲ್ಲಿ ಬಲಪಡಿಸಿತು. ಪಶ್ಚಿಮ ಬಂಗಾಳವು ಕೇಡರ್ (ಕಾರ್ಯಕರ್ತರು) ಚಾಲಿತ ರಾಜ್ಯವಾಗಿರುವುದರಿಂದ ಬಿಜೆಪಿಯು ಬೂತ್‌ಮಟ್ಟದಲ್ಲಿ ಪಕ್ಷದ ಜಾಲವನ್ನು ಬಲಪಡಿಸಿತು. ಕೇಂದ್ರ ನಾಯಕರ ಸತತ ಪ್ರವಾಸ, ಡಿಜಿಟಲ್ ಪ್ರಚಾರ ಮತ್ತು ತಳಮಟ್ಟದ ಕಾರ್ಯಕರ್ತರ ಬಲಾಢ್ಯ ಜಾಲವು ಟಿಎಂಸಿಯ ‘ಗ್ರಾಸ್‌ರೂಟ್’ ನೆಟ್‌ವರ್ಕ್‌ಗೆ ಪ್ರಬಲ ಪೈಪೋಟಿ ನೀಡಿತು.
ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಆಡಳಿತ ವಿರೋಧಿ ಅಲೆ ಟಿಎಂಸಿಗೆ ಹಿನ್ನಡೆ ತಂದಿದ್ದರೆ, ಮಹಿಳಾ ಸುರಕ್ಷತೆ ಮತ್ತು ಸಮುದಾಯ ಆಧಾರಿತ ರಾಜಕೀಯ ಬಿಜೆಪಿಯನ್ನು ಅಧಿಕಾರದ ಗದ್ದುಗೆಯ ಬಳಿ ತಂದು ನಿಲ್ಲಿಸಿದೆ.
