ಬೆಂಗಳೂರು: ನೂತನ ಮುಖ್ಯಮಂತ್ರಿ ಹಾಗೂ ಅವರ ಹೊಸ ಸಂಪುಟದ ಪ್ರಮಾಣ ವಚನ ಸ್ವೀಕಾರಕ್ಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿದ್ದತೆ ಆರಂಭಗೊಂಡಿದ್ದರೂ ನಿರ್ದಿಷ್ಟವಾಗಿ ಯಾವಾಗ ಪ್ರಮಾಣ ವಚನ ನಡೆಯಲಿದೆ ಎಂಬುದು ಶನಿವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನವಾಗಲಿದೆ.
ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ದ್ವಾರಕನಾಥ್ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಮೇ 31, ಜೂ. 5 ಮತ್ತು ಜೂ.6ರ ದಿನಾಂಕ ನೀಡಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ. ಶಿವಕುಮಾರ್ ಅವರು ಬಹುವಾಗಿ ನಂಬುವ ಗುರುಗಳಾದ ಅಜ್ಜಯ್ಯ ಅವರು ಜೂ.1, ಜೂ.3 ಮತ್ತು ಜೂ.5ರ ದಿನಾಂಕ ನೀಡಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ ನಡೆಯುವ ಪ್ರಮಾಣ ವಚನ ಸ್ವೀಕಾರಕ್ಕೆ ಮುಖ್ಯಮಂತ್ರಿ ಸೇರಿ 9 ಅಥವಾ 10 ಮಂದಿ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂಬ ಚಿಂತನೆಯಿದ್ದು, ಈ ಪಟ್ಟಿ ಶನಿವಾರ ರಾತ್ರಿ ಹೈಕಮಾಂಡ್ ನಾಯಕರೊಂದಿಗೆ ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ.
