ಖಾನಾಪುರ: ಮನೆಯ ಹಿಂಭಾಗದ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ನಡೆದಿದೆ.
ಮೃತನನ್ನು ಅಮೀರ್ ಹುಸೇನ್ ಪಾಚಾಪುರ್ (48) ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ಅಶೋಕ ರಾಮಾ ಉಗರಕೋಡ (28) ಎಂಬ ಆರೋಪಿಯನ್ನು ನಂದಗಡ ಪೊಲೀಸರು ಘಟನೆ ನಡೆದ ಕೇವಲ ಒಂದು ಗಂಟೆಯೊಳಗೆ ವಶಕ್ಕೆ ಪಡೆದಿದ್ದಾರೆ.
ಮನೆಯ ಹಿಂಭಾಗದ ಚರಂಡಿ ಮೂಲಕ ನೀರು ಹರಿಸುವ ವಿಚಾರವಾಗಿ ಇಬ್ಬರ ನಡುವೆ ಕಳೆದ ಕೆಲ ದಿನಗಳಿಂದ ಭಿನ್ನಾಭಿಪ್ರಾಯವಿತ್ತು. ಮಂಗಳವಾರ ಬೆಳಿಗ್ಗೆ ಇದೇ ವಿಷಯಕ್ಕೆ ಸಂಬಂಧಿಸಿ ಮಾತಿನ ಚಕಮಕಿ ನಡೆದ ಘಟನೆ ಕೊಲೆಯಲ್ಲಿ ಅಂತ್ಯಗೊಂಡಿದೆ.
ಜಗಳದ ವೇಳೆ ಆರೋಪಿ ಕೆಲಸಕ್ಕೆ ಬಳಸುವ ಪಿಕಾಸಿಯಿಂದ ಹಲ್ಲೆ ನಡೆಸಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಗಂಭೀರವಾಗಿ ಗಾಯಗೊಂಡ ಅಮೀರ್ ಹುಸೇನ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸ್ಥಳ ಮಹಜರು ನಡೆಸಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಬಳಿಕ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದ್ದು, ತಕ್ಷಣ ಕಾರ್ಯಾಚರಣೆ ಆರಂಭಿಸಿದ ನಂದಗಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ನಂದಗಡ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.