ಬೆಳಗಾವಿ: ಪ್ರಜಾಪ್ರಭುತ್ವದಲ್ಲಿರುವ ತತ್ವಗಳನ್ನು ರಕ್ಷಿಸುವಲ್ಲಿ ದೇಶದ ನಾಗರಿಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ವಿಶ್ರಾಂತ ನ್ಯಾಯಮೂರ್ತಿ ಎ. ಎಸ್. ಪಾಶ್ಚಾಪುರೆ ಹೇಳಿದರು.
ಕೆಎಲ್ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಭಾರತದ ಸಂವಿಧಾನ : 75 ವರ್ಷಗಳು, ನಾವು ಪಾಲಿಸಬೇಕಾದ ಸಂವಿಧಾನದ ಪರಂಪರೆ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದು. ಅತ್ಯಂತ ಶ್ರೇಷ್ಠ ವಿಚಾರಗಳಿಂದ ಅದು ಅತ್ಯಂತ ಯಶಸ್ಸು ಪಡೆದುಕೊಂಡಿದೆ ಎಂದು ಹೇಳಿದರು.
ಕರ್ನಾಟಕ ಕಾನೂನು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ನ್ಯಾಯವಾದಿ ಎ.ಕೆ.ಟಗಾರೆ ಮಾತನಾಡಿ, ಸಂವಿಧಾನ ಕೇವಲ ಕಾನೂನು ದಾಖಲೆಯಲ್ಲ. ಆದರೆ ಪ್ರತಿಯೊಬ್ಬ ನಾಗರಿಕರಿಗೂ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಖಾತರಿಪಡಿಸುವ ಜೀವಂತ ಚೌಕಟ್ಟು ಎಂದು ಹೇಳಿದರು.
ಕರ್ನಾಟಕ ಕಾನೂನು ಸಂಸ್ಥೆಯ ಅಧ್ಯಕ್ಷ ಮತ್ತು ನ್ಯಾಯವಾದಿ ಪಿ.ಎಸ್. ಸಾವುಕಾರ ಅಧ್ಯಕ್ಷತೆ ವಹಿಸಿ, ಕೇಶವಾನಂದ ಭಾರತಿ ವರ್ಸಸ್ ಕೇರಳ ರಾಜ್ಯ ಎಂಬ ಮಹತ್ವದ ಮೂಲಭೂತ ಪ್ರಕರಣವನ್ನು ವಿವರಿಸಿದರು. ಪ್ರಾಚಾರ್ಯ ಡಾ.ಎ.ಎಚ್.ಹವಾಲ್ದಾರ ಉಪಸ್ಥಿತರಿದ್ದರು. 28 ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ನ್ಯಾಯವಾದಿ ಆರ್.ಎಸ್. ಮುತಾಲಿಕ್ ಸ್ವಾಗತಿಸಿದರು. ಪ್ರೊ. ಶಿಲ್ಪಾ ರಾಯ್ಕರ್ ಕಾರ್ಯಕ್ರಮದ ಬಗ್ಗೆ ವಿವರಿಸಿದರು.
