ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ತೆರಳುತ್ತಿದ್ದ ಎಂಇಎಸ್ ಕಾರ್ಯಕರ್ತರನ್ನು ಪೊಲೀಸರು ಹತ್ತರಗಿ ಟೋಲ್ ನಾಕಾದಲ್ಲೇ ಶನಿವಾರ ತಡೆದು ಮುಂದೆ ಹೋಗಲು ಬಿಡಲಿಲ್ಲ. ಬೆಳಗಾವಿ ಸೇರಿದಂತೆ ಗಡಿಭಾಗದಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯವಾಗುತ್ತಿದೆ, ನಮ್ಮ ಹಕ್ಕುಗಳನ್ನು ಹತ್ತಿಕ್ಕಲು ಕರ್ನಾಟಕ ಸರಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಎಂಇಎಸ್ ನಾಯಕರು ಕಾರ್ಯಕರ್ತರನ್ನು ಕರೆದುಕೊಂಡು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ತೆರಳುತ್ತಿದ್ದರು. ಈ ಹಿನ್ನಲೆಯಲ್ಲಿ ಪರಿಸ್ಥಿತಿಯನ್ನು ಗಮನಿಸಿದ ಪೊಲೀಸರು ಶಾಂತಿ- ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯಕರ್ತರನ್ನು ತಡೆಹಿಡಿದರು.
ಕೇಂದ್ರ ಸಚಿವ ಅಮಿತ್ ಶಾ ಅವರು ಶನಿವಾರ ಕೊಲ್ಲಾಪುರಕ್ಕೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ಬೆಳಗಾವಿ ಮರಾಠಿಗರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಎಂಇಎಸ್ ಕಾರ್ಯಕರ್ತರು ತೆರಳುತ್ತಿದ್ದರು.