Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!

ನವದೆಹಲಿ: ಸುಮಾರು 28 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ, ತನ್ನ ಗುರುತನ್ನೇ ಬದಲಿಸಿಕೊಂಡು ಮಧ್ಯಪ್ರದೇಶದ ಸಣ್ಣ ಪಟ್ಟಣದಲ್ಲಿ ‘ಡಾ. ಝಟ್ಕಾ’ ಎಂಬ ಹೆಸರಿನಲ್ಲಿ ವೈದ್ಯನಂತೆ ನಟಿಸಿ ಹೊಸ ಜೀವನ ಕಟ್ಟಿಕೊಂಡಿದ್ದ ಪರಾರಿಯಾಗಿದ್ದ ಕುಖ್ಯಾತ ವ್ಯಕ್ತಿಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಕೊನೆಗೂ ಬಂಧಿಸಿದೆ.

53 ವರ್ಷದ ರಾಜಿಂದರ ಬೈರಾಗಿ ಅಲಿಯಾಸ್ ರಾಜಿಂದರ ಸಿಂಗ್ ಯಾದವ್ ಅಲಿಯಾಸ್ ‘ಡಾ. ಝಟ್ಕಾ’ ಕೊಲೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ, ಕಳ್ಳತನ ಹಾಗೂ ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣ ಸೇರಿದಂತೆ ಹಲವು ಗಂಭೀರ ಅಪರಾಧಗಳಲ್ಲಿ ಬೇಕಾಗಿದ್ದ. 1999ರಲ್ಲಿ ಕೈಕೋಳ ಸಮೇತ ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ ಆತ, ಬಳಿಕ ತನ್ನ ಗುರುತನ್ನೇ ಬದಲಿಸಿಕೊಂಡು ಸುಮಾರು ಮೂರು ದಶಕಗಳ ಕಾಲ ಪೊಲೀಸರ ಕೈಗೆ ಸಿಗದೆ ಬದುಕು ನಡೆಸಿದ್ದ.
ದೆಹಲಿ ಪೊಲೀಸರು ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಮುಂಗಾವಳಿಯಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಭೀಕರ ಅಪರಾಧಗಳಲ್ಲಿ ಭಾಗಿಯಾಗಿರುವ ಪರಾರಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚುವ ದೆಹಲಿ ಪೊಲೀಸರ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಈ ಬಂಧನ ಸಾಧ್ಯವಾಗಿದೆ.

27 ವರ್ಷ ಹಳೆಯ ಪ್ರಕರಣದಿಂದ ಸಿಕ್ಕಿತು ಸುಳಿವು
1997ರಲ್ಲಿ ದೆಹಲಿಯ ಜನಕಪುರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಕೊಲೆ ಯತ್ನ ಪ್ರಕರಣಗಳ ತನಿಖೆಯನ್ನು ಪೊಲೀಸರು ಮರುಚುರುಕುಗೊಳಿಸಿದ್ದರು. ಅವುಗಳಲ್ಲಿ ಒಂದು ಪ್ರಕರಣದಲ್ಲಿ ಉತ್ತರನಗರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಜೀವ ತೆಗೆಯುವ ಉದ್ದೇಶದಿಂದ ಮಾರಣಾಂತಿಕ ಚಾಕು ದಾಳಿ ನಡೆದಿತ್ತು.
ಈ ಪ್ರಕರಣಗಳ ತನಿಖೆ ವೇಳೆ ರಾಜಿಂದರ ಬೈರಾಗಿ ಹರಿಯಾಣದ ಪೊಲೀಸ್ ಅಧಿಕಾರಿಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವುದು ಬೆಳಕಿಗೆ ಬಂದಿತು. ಜೊತೆಗೆ, 1999ರಲ್ಲಿ ಉತ್ತರ ಪ್ರದೇಶ ಪೊಲೀಸರು ಘಾಜಿಯಾಬಾದ್ ಜೈಲಿನಿಂದ ಸೋನಿಪತ್ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆದೊಯ್ಯುತ್ತಿದ್ದ ವೇಳೆ ಕೈಕೋಳ ಸಮೇತ ಆತ ಪರಾರಿಯಾಗಿದ್ದ ಸಂಗತಿಯೂ ದೃಢಪಟ್ಟಿತು. ಈ ಸಂಬಂಧ ಪ್ರತ್ಯೇಕ ಪ್ರಕರಣವೂ ದಾಖಲಾಗಿತ್ತು.

ಕಬಡ್ಡಿ ಮೈದಾನದಿಂದ ಅಪರಾಧ ಜಗತ್ತಿನತ್ತ
ವಿಚಾರಣೆ ವೇಳೆ ರಾಜಿಂದರ, ತಾನು ಮೊದಲು ಕಬಡ್ಡಿ ಆಟಗಾರನಾಗಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಕ್ರೀಡಾ ಜೀವನದ ಅವಧಿಯಲ್ಲೇ ಅಪರಾಧಿಗಳ ಸಂಪರ್ಕ ಬೆಳೆದು, ಬಳಿಕ ಭೂಗತ ಲೋಕಕ್ಕೆ ಕಾಲಿಟ್ಟಿದ್ದಾಗಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ.
1998ರ ಮೇ 10ರಂದು ಹರಿಯಾಣದ ಸೋನಿಪತ್‌ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವಧುವಿನ ಕುಟುಂಬದವರೊಂದಿಗೆ ರಾಜಿಂದರ ಜಗಳವಾಡಿದ್ದ. ಅಲ್ಲಿಂದ ತೆರಳಿದ ಆತ, ಸ್ವಲ್ಪ ಸಮಯದ ಬಳಿಕ ಐವರು ಶಸ್ತ್ರಸಜ್ಜಿತ ಸಹಚರರೊಂದಿಗೆ ಮರಳಿ ಬಂದು ಅತಿಥಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದ.
ಈ ಗುಂಡಿನ ದಾಳಿಯಲ್ಲಿ ವಧುವಿನ ಚಿಕ್ಕಪ್ಪ ಹಾಗೂ ಹರಿಯಾಣ ಪೊಲೀಸ್ ಅಧಿಕಾರಿ ಜೈ ಭಗವಾನ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ರಾಜಿಂದರ, ನಂತರ ಘಾಜಿಯಾಬಾದ್ ಜೈಲಿನಿಂದ ಸೋನಿಪತ್ ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆ ಪೊಲೀಸ್ ವಶದಿಂದ ತಪ್ಪಿಸಿಕೊಂಡಿದ್ದ.

ಮಹಾರಾಷ್ಟ್ರದಿಂದ ಮಧ್ಯಪ್ರದೇಶಕ್ಕೆ… ಹೊಸ ಹೆಸರಿನಲ್ಲಿ ಹೊಸ ಬದುಕು
ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಬಳಿಕ ರಾಜಿಂದರ ಮೊದಲು ಮಹಾರಾಷ್ಟ್ರದ ಕೊಲಾಬಾಗೆ ತೆರಳಿದ್ದ. ಅಲ್ಲಿ ಸುಮಾರು ಒಂದು ವರ್ಷ ಕೇಂದ್ರೀಯ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ.
ಬಳಿಕ ಮಧ್ಯಪ್ರದೇಶದ ಮುಂಗಾವಳಿಗೆ ತೆರಳಿದ ಆತ ತನ್ನ ಹೆಸರನ್ನು ರಾಜೇಂದ್ರ ಸಿಂಗ್ ಯಾದವ್ ಎಂದು ಬದಲಿಸಿಕೊಂಡ. ನಂತರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಹಾಗೂ ನಿವಾಸ ಪ್ರಮಾಣಪತ್ರ ಸೇರಿದಂತೆ ಹಲವು ಅಧಿಕೃತ ದಾಖಲೆಗಳನ್ನು ಪಡೆದು ಸ್ಥಳೀಯ ಸಮಾಜದಲ್ಲಿ ಸಾಮಾನ್ಯ ವ್ಯಕ್ತಿಯಂತೆ ಬೆರೆತುಹೋಗಿದ್ದ.

‘ಡಾ. ಝಟ್ಕಾ’ ಹೆಸರಿನಲ್ಲಿ ನಕಲಿ ವೈದ್ಯನಾದ
2003ರಲ್ಲಿ ಸರ್ಕಾರಿ ಆಕ್ಸಿಲಿಯರಿ ನರ್ಸ್ ಮಿಡ್‌ವೈಫ್ (ಎಎನ್‌ಎಂ) ಆಗಿ ಕೆಲಸ ಮಾಡುತ್ತಿದ್ದ ಮಮತಾ ಯಾದವ್ ಅವರನ್ನು ವಿವಾಹವಾದ ರಾಜಿಂದರ, ಬಳಿಕ ಯಾವುದೇ ವೈದ್ಯಕೀಯ ಅರ್ಹತೆ ಅಥವಾ ನೋಂದಣಿಯಿಲ್ಲದೆ ಚಿಕಿತ್ಸೆ ನೀಡಲು ಆರಂಭಿಸಿದ್ದ. ಸ್ಥಳೀಯರಲ್ಲಿ ಆತ ‘ಡಾ. ಝಟ್ಕಾ’ ಎಂದೇ ಪ್ರಸಿದ್ಧನಾಗಿದ್ದ.
ದಂಪತಿಗೆ ಇಬ್ಬರು ಮಕ್ಕಳಿದ್ದು, 17 ವರ್ಷದ ಪುತ್ರ 12ನೇ ತರಗತಿಯಲ್ಲಿ ಹಾಗೂ 16 ವರ್ಷದ ಪುತ್ರಿ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತನ್ನ ಹಿಂದಿನ ಅಪರಾಧ ಜೀವನವನ್ನು ಸಂಪೂರ್ಣ ಮರೆಮಾಚಿ ಕುಟುಂಬದೊಂದಿಗೆ ಸಾಮಾನ್ಯ ವ್ಯಕ್ತಿಯಂತೆ ಬದುಕು ನಡೆಸುತ್ತಿದ್ದ ಎನ್ನಲಾಗಿದೆ.

ದೆಹಲಿ-ಹರಿಯಾಣ-ಉತ್ತರ ಪ್ರದೇಶದಲ್ಲಿ ಎಂಟು ಪ್ರಕರಣಗಳು
ದೆಹಲಿ ಪೊಲೀಸ್ ದಾಖಲೆಗಳ ಪ್ರಕಾರ ರಾಜಿಂದರ ವಿರುದ್ಧ ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಒಟ್ಟು ಎಂಟು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಹರಿಯಾಣ ಪೊಲೀಸ್ ಅಧಿಕಾರಿ ಜೈ ಭಗವಾನ್ ಕೊಲೆ ಪ್ರಕರಣ, ದೆಹಲಿಯ ಜನಕಪುರಿಯ ಎರಡು ಕೊಲೆ ಯತ್ನ ಪ್ರಕರಣಗಳು, ಗನ್ನೌರ್‌ನ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಪ್ರಕರಣ, ಪೊಲೀಸ್ ವಶದಿಂದ ಪರಾರಿಯಾದ ಪ್ರಕರಣ, ದೆಹಲಿಯ ಹೌಜ್ ಖಾಸ್‌ನ ಕಳ್ಳತನ ಪ್ರಕರಣ ಹಾಗೂ ಉತ್ತರ ಪ್ರದೇಶದ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಪ್ರಕರಣಗಳು ಸೇರಿವೆ.
ಈ ಪ್ರಕರಣಗಳ ಪೈಕಿ ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯಗಳು ರಾಜಿಂದರ ಬೈರಾಗಿಯನ್ನು ಈಗಾಗಲೇ ಘೋಷಿತ ಪರಾರಿಯಾದ ಅಪರಾಧಿ (Proclaimed Offender) ಎಂದು ಘೋಷಿಸಿವೆ. ಸುಮಾರು ಮೂರು ದಶಕಗಳ ಕಾಲ ಹೊಸ ಗುರುತು, ಹೊಸ ಹೆಸರಿನಲ್ಲಿ ಪೊಲೀಸರ ಕಣ್ಣಿಗೆ ಮಣ್ಣೆರಚಿ ಬದುಕು ಸಾಗಿಸಿದ್ದ ಈ ಕುಖ್ಯಾತ ಆರೋಪಿ ಕೊನೆಗೂ ದೆಹಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ