ಬೆಳಗಾವಿ : ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ 12 ವರ್ಷ ಹಾಗೂ ಇದೀಗ ದೇಶದ ಪ್ರಧಾನಿಯಾಗಿ 12 ವರ್ಷ ಸೇವೆ ಸಲ್ಲಿಸುತ್ತಿರುವ ನರೇಂದ್ರ ಮೋದಿ ಅವರು ಚುನಾಯಿತ ಸರ್ಕಾರಿ ಮುಖ್ಯಸ್ಥರಾಗಿ ಒಟ್ಟು ಸುಮಾರು 25 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿದ್ದಾರೆ.
ದೇಶದ ಪ್ರಧಾನಿಯಾಗಿ ಸತತ 4,399 ದಿನಗಳನ್ನು ಪೂರೈಸುವ ಮೂಲಕ ಭಾರತದ ಇತಿಹಾಸದಲ್ಲೇ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನ ಮಂತ್ರಿ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತನಿಂದ ಜಾಗತಿಕ ನಾಯಕನವರೆಗೆ ಸಾಗಿದ ಅವರ ಪಯಣ ನಿಜಕ್ಕೂ ಅದ್ಭುತವೇ ಸರಿ. ಜವಾಹರ್ ಲಾಲ್ ನೆಹರು ಅವರ ದಾಖಲೆ ಬದಿಗೊತ್ತಿ, ಚುನಾಯಿತ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು.
370 ನೇ ವಿಧಿಯನ್ನು ರದ್ದುಗೊಳಿಸಿದ್ದು, ರಾಮ ಮಂದಿರದ ಪ್ರತಿಷ್ಠಾಪನೆಯಿಂದ ಹಿಡಿದು, ಉಜ್ವಲ ಯೋಜನೆ, ಜನ ಧನ ಯೋಜನೆ, ಜಲ ಜೀವನ್ ಮಿಷನ್, ಉಡಾನ್, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸ್ವಚ್ಛ ಭಾರತ ಮತ್ತು ಆಯುಷ್ಮಾನ್ ಭಾರತ್ ನಂತಹ ಪರಿವರ್ತನಾ ಉಪಕ್ರಮಗಳವರೆಗೆ ಅವರ ಆಡಳಿತದಲ್ಲಿ ಭಾರತದ ಅಭಿವೃದ್ಧಿ ಪ್ರಯಾಣವನ್ನು ಕಾಣಬಹುದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತ ವಿಶ್ವದ 4 ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ದೇಶದ ಪ್ರಧಾನಿಗಳಾಗಿ ಅಧಿಕಾರ ಸ್ವೀಕರಿಸಿದ ನಂತರ ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಜನಕಲ್ಯಾಣಕ್ಕಾಗಿ ನಿಷ್ಠೆಯಿಂದ ದುಡಿದ ಮೋದಿಯವರು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದು, ಜನರ ಜೀವನ ಮಟ್ಟ ಸುಧಾರಿಸಲು ಶ್ರಮ ವಹಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಜನರ ಏಳಿಗೆಗಾಗಿ ಕಾರ್ಯೋನ್ಮುಖವಾಗಿರುವ ಮೋದಿಯವರು ದೇಶದ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ಹಿಂದೆ ಸರಿದಿಲ್ಲ, ದೇಶ ವಿದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜಾಗತಿಕ ಮಟ್ಟದಲ್ಲಿಯೂ ಜನಮನ್ನಣೆ ಗಳಿಸಿದ್ದಾರೆ. ಉತ್ತಮ ಸ್ನೇಹ ಸಂಬಂಧ ಬೆಳೆಸಿಕೊಂಡು ವ್ಯಾಪಾರ ವಹಿವಾಟಿನ ಒಪ್ಪಂದಗಳನ್ನು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೇಶವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಧಾನಿಗಳ ಸೇವೆ ಹೀಗೆ ಮುಂದುವರೆಯಲಿ, ಭಗವಂತನು ಅವರಿಗೆ ಇನ್ನೂ ಹೆಚ್ಚಿನ ಆಯುರ್ ಆರೋಗ್ಯ ನೀಡಿ ಜನಸೇವೆಯಲ್ಲಿ ತೊಡಗಿಕೊಳ್ಳುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.