ಬೆಳಗಾವಿ: ಗಂಡು ಮಗು ಹುಟ್ಟಿದ ಸಂಭ್ರಮದ ಪಾರ್ಟಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಕೊಂದ ದಾರುಣ ಘಟನೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ನಡೆದಿದೆ.
ಹನುಮಂತ ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ನೇಸರಗಿ ಗ್ರಾಮದಲ್ಲಿ ಮೊಹರಂ ಹಬ್ಬದ ಸಡಗರ ಮನೆ ಮಾಡಿತ್ತು. ಈ ನಡುವೆ ಮಗು ಜನಿಸಿದ ಖುಷಿಯಲ್ಲಿದ್ದ ಹನುಮಂತ ಮತ್ತು ವಿಶ್ವನಾಥ ಇಬ್ಬರು ಗ್ರಾಮದ ಕಟ್ಟೆಯೊಂದರ ಮೇಲೆ ಕುಳಿತು ಮದ್ಯ ಸೇವಿಸುತ್ತಿದ್ದರು. ಮದ್ಯದ ಮತ್ತಿನಲ್ಲಿದ್ದ ಇಬ್ಬರ ನಡುವೆ ಪಾರ್ಟಿ ಕೊಡುವ ವಿಚಾರಕ್ಕೆ ಸಂಬಂಧಿಸಿ ಸಣ್ಣದಾಗಿ ಶುರುವಾದ ಜಗಳ, ನೋಡ ನೋಡುತ್ತಿದ್ದಂತೆಯೇ ವಿಕೋಪಕ್ಕೆ ತಿರುಗಿದೆ.
ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದಾಗ ಕೋಪದಿಂದ ವಿಶ್ವನಾಥ, ಅಲ್ಲೇ ಪಕ್ಕದಲ್ಲಿದ್ದ ಕಲ್ಲನ್ನು ತಗೆದುಕೊಂಡು ಹನುಮಂತನ ತಲೆಗೆ ಜೋರಾಗಿ ಹೊಡೆದಿದ್ದಾನೆ. ದಾಳಿಯ ತೀವ್ರತೆಗೆ ತಲೆಯಿಂದ ತೀವ್ರ ರಕ್ತಸ್ರಾವವಾಗಿ ಹನುಮಂತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನೇಸರಗಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ಕೃತ್ಯ ಎಸಗಿದ ಆರೋಪಿ ವಿಶ್ವನಾಥನನ್ನು ಪೊಲೀಸರು ಬಂಧಿಸಿದ್ದು ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.