Press ID & Credential Portal
Apply / Verify  ➔
LIVE TV LocalCrimeNationalInternationalPoliticsEducationSportsHealthFeature
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಭಾರತದಿಂದ ಅಧಿಕೃತ ಹೆಸರು: ಚೀನಾಕ್ಕೆ ತಿರುಗೇಟು

ನವದೆಹಲಿ: ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾ ಪದೇ ಪದೇ ಹೊಸ ಹೆಸರುಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ, ಭಾರತವು ಶುಕ್ರವಾರ ಅರುಣಾಚಲ ಪ್ರದೇಶದಲ್ಲಿನ 27 ಪ್ರಮುಖ ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಅಧಿಕೃತ ಭಾರತೀಯ ನಕ್ಷೆಯಲ್ಲಿ ಅವುಗಳ ಪ್ರಮಾಣಿತ ಹೆಸರಿನೊಂದಿಗೆ ಔಪಚಾರಿಕವಾಗಿ ಗುರುತಿಸಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸರ್ಕಾರ, “ಅರುಣಾಚಲ ಪ್ರದೇಶದ ಸರ್ವೇ ಆಫ್ ಇಂಡಿಯಾ ಅಧಿಕೃತ ನಕ್ಷೆಯಲ್ಲಿ ಈ ಸ್ಥಳಗಳನ್ನು ಅಧಿಕೃತವಾಗಿ ಗುರುತಿಸುವ ಉದ್ದೇಶ, ಅವುಗಳನ್ನು ನಿಖರವಾಗಿ ಗುರುತಿಸಲು ಅನುಕೂಲವಾಗುವುದರ ಜೊತೆಗೆ ಸಾರ್ವಜನಿಕರಲ್ಲಿ ಅವುಗಳ ಬಗ್ಗೆ ಸಮರ್ಪಕ ಅರಿವು ಮೂಡಿಸುವುದಾಗಿದೆ” ಎಂದು ತಿಳಿಸಿದೆ.
ಅರುಣಾಚಲ ಪ್ರದೇಶದಲ್ಲಿನ ಸ್ಥಳಗಳಿಗೆ ಚೀನಾ ಹೊಸ ಹೆಸರುಗಳನ್ನು ನೀಡುವ ಕ್ರಮವನ್ನು ಭಾರತವು ಆರಂಭದಿಂದಲೇ ತೀವ್ರವಾಗಿ ತಿರಸ್ಕರಿಸುತ್ತಾ ಬಂದಿದೆ. ಇಂತಹ ಕ್ರಮಗಳು “ನಿಷ್ಪ್ರಯೋಜಕ ಹಾಗೂ ಹಾಸ್ಯಾಸ್ಪದ” ಎಂದು ಹೇಳಿರುವ ಭಾರತ, ಇವುಗಳಿಂದ ಅರುಣಾಚಲ ಪ್ರದೇಶ “ಹಿಂದೆಯೂ, ಈಗಲೂ ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಅಂಗವೇ ಆಗಿರುತ್ತದೆ” ಎಂಬ ನಿರ್ವಿವಾದ ಸತ್ಯವನ್ನು ಯಾವುದೇ ರೀತಿಯಲ್ಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ.

ಭಾರತದ ಅಧಿಕೃತ ನಕ್ಷೆಯಲ್ಲಿ ಗುರುತಿಸಲಾದ 27 ಸ್ಥಳಗಳಲ್ಲಿ ಭಾರತ-ಚೀನಾ ವಾಸ್ತವ ನಿಯಂತ್ರಣ ರೇಖೆ (LAC) ಸಮೀಪದಲ್ಲಿರುವ ಲಾಂಗ್ ಜು (Long Ju) ಪ್ರಮುಖವಾಗಿದೆ. 1959ರಲ್ಲಿ ಚೀನಾದ ಪಡೆಗಳು ಈ ಪ್ರದೇಶಕ್ಕೆ ನುಗ್ಗಿದ ಸಂದರ್ಭದಲ್ಲಿ ಭಾರತ-ಚೀನಾ ನಡುವಿನ ಆರಂಭಿಕ ಗಡಿ ಉದ್ವಿಗ್ನತೆಯ ಪ್ರಮುಖ ಕೇಂದ್ರವಾಗಿ ಇದು ಗುರುತಿಸಿಕೊಂಡಿತ್ತು.
ಅದೇ ರೀತಿ, ಅಪ್ಪರ್ ಸುಬನ್ಸಿರಿ ಜಿಲ್ಲೆಯ ಲಾಂಗ್ ಜು ಸಮೀಪದ ಮಾಜಾ (Maja) ಗ್ರಾಮಕ್ಕೂ ಅಧಿಕೃತ ಮಾನ್ಯತೆ ನೀಡಲಾಗಿದೆ. ಈ ಪಟ್ಟಿಯಲ್ಲಿ ಬಿಸಾ (Bisa) ಗ್ರಾಮ, ಪ್ರದೇಶದ ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ ಎತ್ತರದ ಪರ್ವತ ಮಾರ್ಗಗಳಾದ ಡ್ಜೋ ಲಾ (Dzo La), ರಿಜಾ ಲಾ (Riza La) ಹಾಗೂ ಪುಕುರ್ ಲಾ (Pukur La) ಕೂಡ ಸೇರಿವೆ. 1962ರ ಭಾರತ-ಚೀನಾ ಯುದ್ಧದ ಆರಂಭಿಕ ಘರ್ಷಣೆಗಳು ನಡೆದ ಅತ್ಯಂತ ಮಹತ್ವದ ಎತ್ತರದ ಪರ್ವತ ಮಾರ್ಗವಾದ ʼಥಾಗ್ ಲಾ (Thag La)ʼಗೂ ಅಧಿಕೃತ ನಕ್ಷೆಯಲ್ಲಿ ಔಪಚಾರಿಕವಾಗಿ ಗುರುತಿಸಲಾಗಿದೆ.

ಇದರ ಜೊತೆಗೆ, ಚಾಂಗ್ಲಾಂಗ್ ಜಿಲ್ಲೆಯ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾದ ಜೈರಾಂಪುರ(Jairampur)ವನ್ನು ಸಹ ಅಧಿಕೃತವಾಗಿ ಗುರುತಿಸಲಾಗಿದೆ. ಇದು ಪೂರ್ವ ಅರುಣಾಚಲ ಪ್ರದೇಶ ಹಾಗೂ ಮ್ಯಾನ್ಮಾರ್ ಗಡಿಯತ್ತ ಭದ್ರತಾ ಪಡೆಗಳ ಸಂಚಾರಕ್ಕೆ ಪ್ರಮುಖ ಪ್ರವೇಶ ದ್ವಾರವೆಂದು ಪರಿಗಣಿಸಲಾಗಿದೆ.
ಅಧಿಕೃತವಾಗಿ ಗುರುತಿಸಲಾದ ಇತರ ಸ್ಥಳಗಳಲ್ಲಿ ಎತ್ತರದ ಪ್ರದೇಶದಲ್ಲಿರುವ ಸಂಭೋ ಸರೋವರ (a high-altitude lake), ಪೂರ್ವ ಅರುಣಾಚಲ ಪ್ರದೇಶದ ಬರಾ ಕುಂದುನ್ (Bara Kundun) ಮತ್ತು ಚೋಟಾ ಕುಂದುನ್ (Chhota Kundun), ಧನ್ ಬಾರಿ (Dhan Bari), ಪ್ರೀತ್‌ನಗರ (Pritnagar), ತೇರಿತ್‌ನಗರ (Teritnagar), ರಾಮನಗರ (Ramnagar) ಸೇರಿವೆ.
ತವಾಂಗ್ ರಸ್ತೆಯಲ್ಲಿರುವ ಭಾರತೀಯ ಯೋಧ ಜಸ್ವಂತ್ ಸಿಂಗ್ ರಾವತ್ ಅವರ ಸ್ಮಾರಕವಾದ ಜಸ್ವಂತ್ ಗಢ್ (Jaswant Garh), ಸಾಗರ್ (Sagar), ಪದ್ಮ (Padma), ಜ್ಯೋತಿನಗರ (Jyotinagar) ಹಾಗೂ ಬೈಸಾಖಿ (Baisakhi) ಗ್ರಾಮಗಳಿಗೂ ಅಧಿಕೃತ ಮಾನ್ಯತೆ ನೀಡಲಾಗಿದೆ.

1962ರ ಯುದ್ಧದ ವೀರ ಯೋಧ ತ್ರಿಲೋಕ ಸಿಂಗ್ ಥಾಪಾ ಅವರ ಸ್ಮರಣಾರ್ಥ ನಿರ್ಮಿಸಲಾದ ಶೇರ್-ಎ-ಥಾಪಾ ಸ್ಮಾರಕ (Sher-e-Thapa Memorial), ಚೋಟಾ ರೋಪುಕ್ (Chhota Ropuk), ಬರಾ ರೋಪುಕ್ (Bara Ropuk), ಶಿವಾಜಿ ನಗರ (Shivaji Nagar), ಸುನ್‌ಪುರಾ (Sunpura), ಕಮ್ಲಾಂಗ್ ಅಭಯಾರಣ್ಯದ ಸಮೀಪದ ಕಮ್ಲಾಂಗ್ ನಗರ (Kamlang Nagar) ಹಾಗೂ ಬುದ್ಧಮಂದಿರ (Buddhamandir) ಕೂಡ ಈ ಪಟ್ಟಿಯಲ್ಲಿ ಸೇರಿವೆ.
ಇದೇ ವೇಳೆ, ಭಾರತೀಯ ಭೂಭಾಗಕ್ಕೆ ಚೀನಾ “ಕಲ್ಪಿತ ಹೆಸರುಗಳನ್ನು” ನೀಡುವ ಪ್ರಯತ್ನಗಳನ್ನು ಭಾರತ ಮತ್ತೊಮ್ಮೆ ತಳ್ಳಿಹಾಕಿದ್ದು, ಇಂತಹ “ಆಧಾರರಹಿತ ಕಥನಗಳನ್ನು” ಸೃಷ್ಟಿಸುವ ಯತ್ನಗಳು ವಾಸ್ತವ ಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಅಲ್ಲದೆ, ಇಂತಹ ಕ್ರಮಗಳು ಭಾರತ-ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸಹಜ ಸ್ಥಿತಿಗೆ ತರಲು ನಡೆಯುತ್ತಿರುವ ಪ್ರಯತ್ನಗಳಿಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಭಾರತ ಎಚ್ಚರಿಸಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು 2017ರಲ್ಲಿ ‘ಜಾಂಗ್ನಾನ್’ (Zangnan) ಎಂದು ಕರೆಯುವ ಅರುಣಾಚಲ ಪ್ರದೇಶದ ಆರು ಸ್ಥಳಗಳಿಗೆ ಮೊದಲ ಬಾರಿಗೆ ಪ್ರಮಾಣಿತ ಹೆಸರುಗಳನ್ನು ಪ್ರಕಟಿಸಿತ್ತು. ಬಳಿಕ 2021ರಲ್ಲಿ 15 ಸ್ಥಳಗಳ ಎರಡನೇ ಪಟ್ಟಿಯನ್ನು ಹಾಗೂ 2023ರಲ್ಲಿ 11 ಸ್ಥಳಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

Author
Jana Jeevala News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
RCU ದಲ್ಲಿ ಲಕ್ಷಾಂತರ ರೂ  ಗೋಲ್ಮಾಲ್, ಮೂವರು ಜೈಲುಪಾಲು.ಚೌತಿ ರಾತ್ರಿ ಅವಘಡ:  ಚವಾಟಗಲ್ಲಿಯಲ್ಲಿ ನಾಲ್ವರು ಸಜೀವ ದಹನದ್ವಿಚಕ್ರ ವಾಹನ-ಸಾರಿಗೆ ಬಸ್ ಅಪಘಾತ: ಮೂವರು ಸ್ಥಳದಲ್ಲೇ ಸಾವುಬೆಂಗಳೂರು-ಬೆಳಗಾವಿ ನಡುವೆ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.ಪಾರ್ಕಿಂಗ್‌ ಮಾಡಿದ್ದ ಕಾರಿನ ಬಾನೆಟ್‌ನಲ್ಲಿ ಅಡಗಿತ್ತು ಬೃಹತ್‌ ಹೆಬ್ಬಾವು ; ಬೆಚ್ಚಿಬಿದ್ದ ನಿವಾಸಿಗಳು  ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರು