ಬೆಳಗಾವಿ : ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್‌ನ ಮಾಲೀಕ ಶಿವಾನಂದ ನೀಲಣ್ಣವರ ಹಾಗೂ ಅವರ ಆಪ್ತರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.
ಬೆಳಗಾವಿ, ಚಿಕ್ಕೋಡಿ ಮತ್ತು ಹುಕ್ಕೇರಿ ಸೇರಿದಂತೆ ಮೂರು ಕಡೆಗಳಲ್ಲಿ ಬೆಂಗಳೂರು ಹಾಗೂ ಗೋವಾದ ಜಾರಿ ನಿರ್ದೇಶನಾಲಯದ ( ಇಡಿ) ಅಧಿಕಾರಿಗಳ ತಂಡಗಳು ಏಕಕಾಲದಲ್ಲಿ ಶೋಧ ಕಾರ್ಯ ನಡೆಸಿವೆ. ಬೆಳಗಾವಿಯ ಶಿವಬಸವ ನಗರದ ಅಪಾರ್ಟ್ಮೆಂಟ್ ಲ್ಲಿರುವ ಶಿವಾನಂದ ನೀಲಣ್ಣವರ ನಿವಾಸ, ಚಿಕ್ಕೋಡಿಯಲ್ಲಿರುವ ಶಿವಂ ಅಸೋಸಿಯೇಟ್ಸ್ ಕಚೇರಿ ಹಾಗೂ ಎಮ್ ಡಿ ಸುಭಾಷ್ ನಂದರಗಿ ಮನೆ ಮತ್ತು ಹುಕ್ಕೇರಿ ತಾಲ್ಲೂಕಿನ ಬಡಕುಂದ್ರಿ ಗ್ರಾಮದಲ್ಲಿರುವ ಶಿವಾನಂದ ನೀಲಣ್ಣವರ ಪತ್ನಿ ಸಂಗೀತಾ ಅವರ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ.
ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣವರ ಪತ್ನಿ ಸಂಗೀತಾ ಹಾಗೂ ಅವರ ಬಾವಮೈದ ಸಂಜು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ವಿವರಗಳ ಪ್ರಕಾರ, ಹೆಚ್ಚಿನ ಬಡ್ಡಿ ನೀಡುವ ಭರವಸೆ ನೀಡಿ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿ, 40 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಡ್ಸ್ ಕಾಯ್ದೆ (BUDS Act) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು.
ಮೇ 15ರಂದು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆ ನಡೆಸುತ್ತಿರುವ ವೇಳೆ ಇದೀಗ ಇಡಿ ಕೂಡ ಹಣ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಆಯಾಮದಲ್ಲಿ ತನಿಖೆ ಆರಂಭಿಸಿದೆ.
ಪ್ರಸ್ತುತ ಶಿವಾನಂದ ನೀಲಣ್ಣವರ ಅವರು ಜಾಮೀನಿನ ಮೇಲೆ ಹೊರಗಿದ್ದು, ಇಡಿ ದಾಳಿಯಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದಿದೆ. ಶೋಧ ಕಾರ್ಯದ ವೇಳೆ ವಶಪಡಿಸಿಕೊಂಡ ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ತನಿಖೆ ಮುಂದುವರಿದಿದೆ.