ಬೆಳಗಾವಿ : ಗೋಕಾಕ ತಾಲೂಕಿನ ಘಟಪ್ರಭಾ ರೈಲು ನಿಲ್ದಾಣದ ಹತ್ತಿರ ರೈಲು ನಿಲ್ದಾಣಕ್ಕೆ ಹೊಂದಿಕೊಂಡು ಘಟಪ್ರಭಾ ನಿವಾಸಿಗಳು ನಿರ್ಮಿಸಿದ ವಸತಿ /ಅಂಗಡಿಗಳನ್ನು ತೆರವುಗೊಳಿಸಲು ರೇಲ್ವೆ ಇಲಾಖೆಯು ನೀಡಿದ ನೋಟಿಸ್ ವಿಚಾರವಾಗಿ ದಿನಾಂಕ: 13-07-2026 ರಂದು ನೈರುತ್ಯ ವಲಯ ರೇಲ್ವೆ ಅಧಿಕಾರಿಗಳೊಂದಿಗೆ ಘಟಪ್ರಭಾ ನಿವಾಸಿಗಳು ಸಮ್ಮುಖದಲ್ಲಿ ಸಭೆಯನ್ನು ನಡೆಸಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಘಟಪ್ರಭಾ ರೈಲು ನಿಲ್ದಾಣಕ್ಕೆ ಹೊಂದಿಕೊಂಡು ಘಟಪ್ರಭಾ ನಿವಾಸಿಗಳು ನಿರ್ಮಿಸಿದ ವಸತಿ / ಅಂಗಡಿಗಳು ಹಲವು ದಶಕಗಳಷ್ಟು ಹಳೆಯ ಕಟ್ಟಡಗಳಾಗಿದ್ದು, ಇದರ ಮಾಲಿಕರು, ಮಾಲಿಕತ್ವದ ಅಗತ್ಯ ದಾಖಲಾತಿಗಳನ್ನು ಸಹ ಹೊಂದಿದ್ದು, ಇವುಗಳ ತೆರವಿಗೆ ನೀಡಿದ ನೋಟಿಸ್ ಬಗ್ಗೆ ರೇಲ್ವೆ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಲಾಗಿ, ರೇಲ್ವೆ ಇಲಾಖೆಗೆ ಪೂರಕವಾಗಿ ಅವರೂ ಸಹ ಅಗತ್ಯ ದಾಖಲಾತಿಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ತಿಳಿಯಲು ರೇಲ್ವೆ ಇಲಾಖೆ ಮತ್ತು ರಾಜ್ಯ ಸರಕಾರದ ಭೂ-ಮಾಪನ ಇಲಾಖೆ ಜಂಟಿ ಸಮೀಕ್ಷೆಯನ್ನು ನಡೆಸಿ ಒಂದು ನಿಖರವಾದ ವರದಿಯನ್ನು ನೀಡುವಂತೆ ತಿಳಿಸಿ, ವಿಷಯ ಇತ್ಯರ್ಥವಾಗುವ ವರೆಗೆ ರೇಲ್ವೆ ಇಲಾಖೆ ಅಧಿಕಾರಿಗಳು, ವಿವಾದವಿರುವ ಸ್ಥಳದಲ್ಲಿ ವಾಸವಿರುವ ನಿವಾಸಿಗಳಿಗೆ ಜಾಗವನ್ನು ತೆರವು ಮಾಡುವ ಕುರಿತು ಯಾವುದೇ ತರಹದ ನೋಟಿಸ್ ನೀಡದೆ ಇರುವಂತೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ನೈರುತ್ಯ ವಲಯದ ರೇಲ್ವೆ ಅಭಿಯಂತರರಾದ ರಾಜೇಶ ಮತ್ತು ಸೆಂಥಿಲ್, ಘಟಪ್ರಭಾ ನಿವಾಸಿಗಳಾದ ಸಚಿನ ಖಡಬಡೆ ಹಾಗೂ ವ್ಯಾಪಾರಸ್ಥರು ಹಾಜರಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ತೆರಿಗೆ ಹಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪೋಷಣೆ
ಭಾರತ ಜೋಡೊ ಹೆಸರಿನಲ್ಲಿ ಸರ್ಕಾರಿ ಖಜಾನೆಗೆ ಕನ್ನ - ಜಗದೀಶ್ ಶೆಟ್ಟರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಯುವ ಜನರ ಕಲ್ಯಾಣದ ಹೆಸರಿನಲ್ಲಿ ಸ್ವಪಕ್ಷದ ಕಾರ್ಯಕರ್ತರನ್ನು ಪೋಷಿಸುವ ಲಜ್ಜೆಗೆಟ್ಟ ರಾಜಕಾರಣಕ್ಕೆ ಕೈಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಯುವಕರಿಗೆ ಉದ್ಯೋಗ ನೀಡಲು ಯೋಗ್ಯತೆಯಿಲ್ಲದ ಈ ಸರ್ಕಾರ, 'ಭಾರತ ಜೋಡೊ ಯುವ ಸಂಘ'ಗಳ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಕಾಂಗ್ರೆಸ್ ಪಕ್ಷ ಬಲಪಡಿಸಲು ದುರುಪಯೋಗಪಡಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಲಕ್ಷಾಂತರ ನಿರುದ್ಯೋಗಿ ಯುವಕರಿದ್ದಾರೆ. ಎಲ್ಲರಿಗೂ ಸಮಾನವಾಗಿ ಸೌಲಭ್ಯ ನೀಡುವ ಬದಲು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನೇ ತುಂಬಿಕೊಂಡಿರುವ 'ಭಾರತ ಜೋಡೊ' ಸಂಘಗಳಿಗೆ ಮಾತ್ರ ಸರ್ಕಾರಿ ಹಣ ನೀಡುವುದು ಯಾವ ನ್ಯಾಯ? ಸರ್ಕಾರದ ಹಣ ಯುವಕರಿಗೆ ಸಮಾನವಾಗಿ ಹಂಚಿಕೆಯಾಗಬೇಕೇ ಹೊರತು, ಕಾಂಗ್ರೆಸ್ ನವರಿಗಲ್ಲ.
ರಾಜ್ಯದಲ್ಲಿ 10 ಸಾವಿರ ಸಂಘಗಳನ್ನು ಸ್ಥಾಪಿಸಿ, ವಾರ್ಷಿಕ 10 ಸಾವಿರ ರೂ. ನೀಡುವುದಾಗಿ ಹೇಳಿರುವ ಸರ್ಕಾರ, ಈ ಯೋಜನೆಗೆ ಬರೋಬ್ಬರಿ 1010 ಕೋಟಿ ರೂ. ಮೀಸಲಿಟ್ಟಿದೆ. ಇದು ಹಗರಣದ ಮುನ್ಸೂಚನೆ ನೀಡುತ್ತಿದೆ. ಯುವ ಸಂಘಗಳ ಹೆಸರಿನಲ್ಲಿ ಬಿಡುಗಡೆಯಾಗುವ ಕೋಟ್ಯಂತರ ರೂಪಾಯಿ ನೇರವಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ನಿಧಿಗೆ ಮತ್ತು ಕಾರ್ಯಕರ್ತರ ಜೇಬಿಗೆ ಹೋಗುತ್ತಿರುವುದು ಸ್ಪಷ್ಟವಾದಂತಿದೆ.
ಭಾರತ ಜೋಡೊ' ಎಂಬುದು ಕಾಂಗ್ರೆಸ್ ಪಕ್ಷದ ರಾಜಕೀಯ ಬ್ರ್ಯಾಂಡ್. ಪಕ್ಷದ ಹೆಸರಿರುವ ಸಂಘಗಳಿಗೆ ಸಾರ್ವಜನಿಕರ ಹಣವನ್ನು ನೀಡುವುದು ಸಂವಿಧಾನ ವಿರೋಧಿ ಮತ್ತು ಕಾನೂನುಬಾಹಿರ. ತಕ್ಷಣವೇ ಈ ಯೋಜನೆಗೆ ಸರ್ಕಾರದಿಂದ ಹಣ ನೀಡುವುದನ್ನು ನಿಲ್ಲಿಸಬೇಕು.
ರಾಜ್ಯದ ರೈತರು ಬರಗಾಲ, ಬೆಳೆಹಾನಿಯಿಂದ ಕಣ್ಣೀರು ಹಾಕುತ್ತಿದ್ದಾರೆ, ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಸರ್ಕಾರ ರಾಗ ಹಾಡುತ್ತಿದೆ. ಆದರೆ, ತಮ್ಮ ಪಕ್ಷದ ಕಾರ್ಯಕರ್ತರನ್ನು ಸಾಕಲು ಮಾತ್ರ ಸರ್ಕಾರಕ್ಕೆ 1010 ಕೋಟಿ ರೂ. ಸಿಗುತ್ತದೆ. ಇದು ಕೇವಲ ಸಾರ್ವಜನಿಕ ಹಣದ ದುರುಪಯೋಗವಲ್ಲ, ತೆರಿಗೆ ಪಾವತಿಸುವ ಜನತೆಗೆ ಎಸಗುತ್ತಿರುವ ದ್ರೋಹ.
ಕಾಂಗ್ರೆಸ್ ಸರ್ಕಾರ ತಕ್ಷಣವೇ ಈ ಪಕ್ಷಪಾತದ ಯೋಜನೆಯನ್ನು ಕೈಬಿಡಬೇಕು. ಯುವಕರಿಗೆ ನೆರವು ನೀಡುವ ಪ್ರಾಮಾಣಿಕ ಉದ್ದೇಶವಿದ್ದರೆ, ಯಾವುದೇ ಪಕ್ಷದ ತಾರತಮ್ಯವಿಲ್ಲದೆ ಅರ್ಹ ಯುವಕರಿಗೆ ನೇರವಾಗಿ ಸೌಲಭ್ಯ ತಲುಪಿಸಲಿ. ಇಲ್ಲದಿದ್ದರೆ, ಸರ್ಕಾರದ ಹಣವನ್ನು ಸ್ವಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವ ಈ ನಿರ್ಧಾರದ ವಿರುದ್ಧ ಬಿಜೆಪಿ ತೀವ್ರ ಸ್ವರೂಪದ ಹೋರಾಟ ನಡೆಸಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಎಚ್ಚರಿಸಿದ್ದಾರೆ.