ಲಕ್ನೋ: ಉತ್ತರ ಪ್ರದೇಶದಾದ್ಯಂತ ಬುಧವಾರ ಸಂಭವಿಸಿದ ಭೀಕರ ಗುಡುಗು ಸಹಿತ ಮಳೆ ಮತ್ತು ಚಂಡಮಾರುತಕ್ಕೆ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸಾವಿರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ರಾಜ್ಯದ ಹಲವೆಡೆ ಮನೆಗಳು ಧರಾಶಾಯಿಯಾಗಿದ್ದು, ಭಾರೀ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ.
ಈ ನೈಸರ್ಗಿಕ ವಿಕೋಪದಲ್ಲಿ ಪ್ರಯಾಗರಾಜ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಇಲ್ಲಿ 21 ಮಂದಿ ಸಾವಿಗೀಡಾದ್ದಾರೆ. ಉಳಿದಂತೆ ಭದೋಹಿಯಲ್ಲಿ 18, ಮಿರ್ಜಾಪುರದಲ್ಲಿ 15, ಫತೇಪುರದಲ್ಲಿ 10, ಉನ್ನಾವೋ ಮತ್ತು ಬದೌನ್ ದಲ್ಲಿ ತಲಾ 6,ಪ್ರತಾಪಗಢ ಮತ್ತು ಬರೇಲಿಯಲ್ಲಿ ತಲಾ 4 ಸೇರಿದಂತೆ 100ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ ಸಂಜೆ ಹವಾಮಾನವು ದಿಢೀರ್ ಬದಲಾಗಿ, ರಾಜ್ಯದ ಬಹುಭಾಗ ದೂಳಿನ ಮೋಡಗಳಿಂದ ಆವೃತವಾಯಿತು. ಅತಿ ವೇಗವಾಗಿ ಬೀಸಿದ ಗಾಳಿಗೆ ರಸ್ತೆಬದಿಯ ಬೃಹತ್ ಜಾಹೀರಾತು ಫಲಕಗಳು (Hoardings) ಮತ್ತು ಟಿನ್ ಶೆಡ್‌ಗಳು ಹಾರಿಹೋಗಿವೆ. ಮರಗಳು ಬಿದ್ದು ವಾಹನಗಳು ನಜ್ಜುಗುಜ್ಜಾಗಿದ್ದು, ಹಲವು ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಬರೇಲಿಯ ಬಾಮಿಯಾನ ಗ್ರಾಮದಲ್ಲಿ ಸಂಭವಿಸಿದ ಘಟನೆಯೊಂದು ಮೈನಡುಗಿಸುವಂತಿದೆ. ಅಲ್ಲಿ ವ್ಯಕ್ತಿಯೊಬ್ಬ ಟಿನ್ ಶೆಡ್ ಶೀಟ್ ಜೊತೆ ಗಾಳಿಯಲ್ಲಿ ಹಾರಿಹೋಗಿ ಸುಮಾರು 50 ಅಡಿ ದೂರದ ಜಮೀನಿಗೆ ಬಿದ್ದಿದ್ದಾನೆ. ಕೈಕಾಲು ಮುರಿದುಕೊಂಡಿರುವ ವ್ಯಕ್ತಿಯನ್ನು ನನ್ಹೇ ಮಿಯಾ ಎಂದು ಗುರುತಿಸಲಾಗಿದೆ. , “ನಾನು ಹಗ್ಗ ಹಿಡಿದಿದ್ದೆ, ಆದರೆ ಗಾಳಿ ನನ್ನನ್ನು ತಗಡಿನ ಶೆಡ್ ಜೊತೆ ಎತ್ತಿ ಬಿಸಾಡಿತು” ಎಂದು ಅವರು ತಮ್ಮ ಭೀಕರ ಅನುಭವವನ್ನು ಹಂಚಿಕೊಂಡಿದ್ದಾರೆ.
ಭದೋಹಿಯ ರಾಂಪುರದಲ್ಲಿ ಪಾಂಟೂನ್ ಸೇತುವೆ ಹಾನಿಗೊಳಗಾದ ಪರಿಣಾಮ ಹಲವರು ಗಂಗಾ ನದಿಗೆ ಬಿದ್ದಿರುವ ಆತಂಕ ಎದುರಾಗಿದೆ. ಮಿರ್ಜಾಪುರದಲ್ಲಿ ಮತ್ತೊಂದು ಸೇತುವೆ ಹಾನಿಯಾಗಿ 20ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಫತೇಪುರದಲ್ಲಿ ಖಗಾ ತಹಸಿಲ್‌ನಲ್ಲಿ ಗೋಡೆ ಕುಸಿತ ಮತ್ತು ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಐವರು ಮಹಿಳೆಯರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ. ಪ್ರತಾಪ್‌ಗಢ ಮತ್ತು ದೇವರಿಯಾದಲ್ಲಿ ಸಿಡಿಲು ಬಡಿದು ಹಾಗೂ ಗೋಡೆ ಕುಸಿತದಿಂದಾಗಿ ಹಲವರು ಮೃತಪಟ್ಟಿದ್ದಾರೆ.
