ಬೆಳಗಾವಿ : ಖಾನಾಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಜಾಂಬೋಟಿ ಹಾಗೂ ಕುಂಬಾರ್ಡಾ ಗ್ರಾಮಗಳಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ಸ್ಥಾಪಿಸುವಂತೆ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಶಾಸಕ ವಿಠ್ಠಲ ಹಲಗೇಕರ ಮನವಿ ಸಲ್ಲಿಸಿದರು.
ದಟ್ಟ ಅರಣ್ಯ ಪ್ರದೇಶ, ದುರ್ಗಮ ಗ್ರಾಮಗಳು, ಬೆಳಗಾವಿ–ಚೋರ್ಲಾ–ಪಣಜಿ, ಧಾರವಾಡ–ಪಣಜಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಈ ಬೇಡಿಕೆ ಸಲ್ಲಿಸಲಾಗಿದೆ ಎಂದು ವಿಠ್ಠಲ ಹಲಗೇಕರ ತಿಳಿಸಿದರು.
ಈ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾದರೆ ಗ್ರಾಮೀಣ ಜನರಿಗೆ ಸಮೀಪದಲ್ಲೇ ಆರೋಗ್ಯ ಸೇವೆ ಲಭ್ಯವಾಗುತ್ತದೆ. ಅಪಘಾತಕ್ಕೊಳಗಾದವರಿಗೆ ತಕ್ಷಣ ಚಿಕಿತ್ಸೆ ದೊರೆಯುತ್ತದೆ.
ಗರ್ಭಿಣಿಯರು, ವೃದ್ಧರು ಹಾಗೂ ಮಕ್ಕಳಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸಿಗಲಿದೆ. ಸಾರ್ವಜನಿಕರ ಅಮೂಲ್ಯ ಜೀವಗಳನ್ನು ರಕ್ಷಿಸಲು ನೆರವಾಗಲಿದೆ ಎಂದು ಶಾಸಕರು ಮನವರಿಕೆ ಮಾಡಿದರು.