ಬೆಳಗಾವಿ : ವಿದ್ಯಾರ್ಥಿಗಳು ಕೇವಲ ಪಠ್ಯಧಾರಿತ ಜ್ಞಾನಕ್ಕೆ ಸೀಮಿತವಾಗದೆ, ಕಾಲೇಜು ಆಯೋಜಿಸುವ ವಿವಿಧ ಕಾನೂನು ಚಟುವಟಿಕೆಗಳು, ವಾದ-ವಿವಾದ ಸ್ಪರ್ಧೆಗಳು, ಮೂಟ್ ಕೋರ್ಟ್ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು , ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ ನಾಯಕ್ ಕರೆ ನೀಡಿದರು.
ಕೆ.ಎಲ್.ಇ. ಸಂಸ್ಥೆಯ ಬಿ.ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದಲ್ಲಿ ಮೇ 15 ಮತ್ತು 16ರಂದು ಜರುಗುತ್ತಿರುವ ರಾಷ್ಟ್ರೀಯ ಕಾನೂನು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂತಹ ಕಾನೂನೋತ್ಸವಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ವಾಕ್ಚಾತುರ್ಯ ಹಾಗೂ ಕಾನೂನು ಜ್ಞಾನವನ್ನು ವೃದ್ಧಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.
ನ್ಯಾಯಾಂಗ ವ್ಯವಸ್ಥೆಯ ಸುಸೂತ್ರ ನಿರ್ವಹಣೆಯಲ್ಲಿ ವಕೀಲರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ವಕೀಲ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಸಮಾಜ ಸೇವೆಯೊಂದಿಗೆ ನಿಕಟವಾಗಿ ಸಂಬಂಧ ಹೊಂದಿರುವ ಒಂದು ಗೌರವಾನ್ವಿತ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಯುವ ವಕೀಲರು ಸೂಕ್ಷ್ಮ ಮನೋಭಾವ ಹೊಂದಿರಬೇಕು. ಸಮಾಜದ ಅಗತ್ಯತೆಗಳು, ಜನರ ಸಂಕಷ್ಟಗಳು ಮತ್ತು ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಂಡು ನ್ಯಾಯಾಲಯಕ್ಕೆ ಸರಿಯಾದ ಮಾರ್ಗದರ್ಶನ ಹಾಗೂ ಸಹಕಾರ ನೀಡುವುದು ಪ್ರತಿಯೊಬ್ಬ ಭವಿಷ್ಯದ ವಕೀಲನ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಪ್ರಾಮಾಣಿಕತೆ, ನೈತಿಕ ಮೌಲ್ಯಗಳು ಮತ್ತು ಮಾನವೀಯತೆ ಎಂಬ ಗುಣಗಳನ್ನು ತಮ್ಮ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕಾನೂನು ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೇವಲ ಜ್ಞಾನ ಸಾಕಾಗುವುದಿಲ್ಲ; ಸಮಾಜದ ಪರ ಕಾಳಜಿ, ನ್ಯಾಯದ ಮೇಲಿನ ನಿಷ್ಠೆ ಹಾಗೂ ಸೇವಾ ಮನೋಭಾವವೂ ಅಗತ್ಯವೆಂದು ಅವರು ಹೇಳಿದರು. ಯುವ ಕಾನೂನು ವಿದ್ಯಾರ್ಥಿಗಳು ದೇಶದ ನ್ಯಾಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಆರ್. ಬಿ. ಬೆಲ್ಲದ್ ಅವರು, ಕೆ.ಎಲ್.ಇ. ಸಂಸ್ಥೆಯು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ವಿವರಿಸಿ, ವಿದ್ಯಾರ್ಥಿಗಳು ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಅಧ್ಯಯನಶೀಲರಾಗಬೇಕು. ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ತಿಳಿಸಿದರು.
ಕಾನೂನು ಉತ್ಸವದಲ್ಲಿ ಗೋವಾದ ವಿ.ಎಂ. ಸಲಗಾಂವ್ಕರ್ ಕಾನೂನು ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಬಾಬಾಗೌಡ ಪಾಟೀಲ, ಪ್ರಾಂಶುಪಾಲ ಡಾ. ಜ್ಯೋತಿ ಜಿ. ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಯೋಜಕ ಹಾಗೂ ಸಹ ಪ್ರಾಧ್ಯಾಪಕ ಡಾ. ಸಂತೋಷ ಪಾಟೀಲ ಉಪಸ್ಥಿತರಿದ್ದರು. ಸಾಯಿರಾಜ ವಂದಿಸಿದರು. ಗಾಯತ್ರಿ ನಿರೂಪಿಸಿದರು. ದೇಶದ ವಿವಿಧ ಭಾಗಗಳಿಂದ 16ಕ್ಕೂ ಹೆಚ್ಚು ಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
