ಬೆಳಗಾವಿ: 'ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪರಿಹರಿಸಲು ಮಹಾಜನ್ ಆಯೋಗದ ವರದಿ ಅನುಷ್ಠಾನಗೊಳಿಸುವುದು ಅನಿವಾರ್ಯ ಎಂಬ ನಿರ್ಣಯವನ್ನು 1988ರ ಮಾರ್ಚ್ 23ರಂದು ಸದನ ಅಂಗೀಕರಿಸಿತ್ತು. ಅದೇ ಮಾದರಿಯನ್ನು ಬೆಳಗಾವಿ ಮಹಾನಗರ ಪಾಲಿಕೆ ಅನುಸರಿಸಿ ರಾಜ್ಯದ ಪರ ನಿರ್ಣಯ ಅಂಗೀಕರಿಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ' ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪರ ಪಾಲಿಕೆ ನಿರ್ಣಯ ಅಂಗೀಕರಿಸಬೇಕು ಎಂದು ಒತ್ತಾಯಿಸಿ ನಾವು ನಡೆಸುತ್ತಿರುವ ಚಳವಳಿಯಲ್ಲಿ ನಮಗೆ ಮೊದಲ ಜಯ ಸಿಕ್ಕಿದೆ ಎಂದರು.
ಮಾರ್ಚ್ ತಿಂಗಳಲ್ಲಿ ಮೊದಲ ಸಲ ಈ ಬೇಡಿಕೆ ಮುಂದಿಟ್ಟಿದ್ದೆವು. ಆದರೆ, ಮಾರ್ಚ್, ಏಪ್ರಿಲ್‌ನಲ್ಲಿ ನಡೆದ ಪಾಲಿಕೆ ಪರಿಷತ್ ಸಭೆಗಳಲ್ಲಿ ಈ ವಿಷಯ ಚರ್ಚಿಸಲಿಲ್ಲ. ಮೇ ತಿಂಗಳಲ್ಲಿ ನಡೆದ ಸಭೆಯಲ್ಲಿ, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಹಾಗಾಗಿ ಸರ್ಕಾರದಿಂದ ಅಭಿಪ್ರಾಯ ಕೋರಿ ಮುಂದಿನ ಕ್ರಮ ವಹಿಸುತ್ತೇವೆ ಎಂದು ಮೇಯರ್ ಪ್ರೀತಿ ಕಾಮಕಾರ ನಿರ್ಣಯ ಅಂಗೀಕರಿಸಿದ್ದರು ಎಂದು ಹೇಳಿದರು.
ಈಗ ನಮ್ಮ ಬೇಡಿಕೆ ಪರಿಗಣಿಸಿದ ಸರ್ಕಾರವು, ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವಧಿಯಲ್ಲಿ ಶಾಸಕಾಂಗ ಅಂಗೀಕರಿಸಿದ್ದ ನಿರ್ಣಯದ ಪ್ರತಿಯನ್ನು ಕಳುಹಿಸಿದೆ. ಇದನ್ನು ಎಚ್.ಕೆ.ಪಾಟೀಲ ಮಂಡಿಸಿದ್ದರು. ಆಗ ಮಹಾಜನ್ ಆಯೋಗದ ತೀರ್ಪನ್ನು ಸಮಗ್ರವಾಗಿ ಜಾರಿಗೊಳಿಸುವುದು ಅನಿವಾರ್ಯ ಎಂದು ಸದನ ತಿಳಿಸಿತ್ತು ಎಂದರು.
ಪಾಲಿಕೆಯು ಈ ನಿರ್ಣಯ ಅಂಗೀಕರಿಸದಿದ್ದರೆ, ಸರ್ಕಾರದ ಮಾರ್ಗಸೂಚಿ ಗೌರವಿಸದಿದ್ದಕ್ಕಾಗಿ ಅದನ್ನು ಸೂಪರ್‌ಸೀಡ್ ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಇನ್ಮುಂದೆ ಇಂಥ ಪ್ರಸ್ತಾವಗನ್ನು ಸರ್ಕಾರಕ್ಕೆ ಸಲ್ಲಿಸದಂತೆಯೂ ಪಾಲಿಕೆ ಆಯುಕ್ತರಿಗೆ ಸೂಚನೆ ಕೊಟ್ಟಿದೆ. ಮೇಯರ್ ಮಾಡಿದ ತಪ್ಪಿನಿಂದಾಗಿ ಆಯುಕ್ತರು ಶಿಕ್ಷೆ ಅನುಭವಿಸುವಂತಾಗಿದೆ ಎಂದರು.
ಮಹಾಜನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು ಎಂದು ಕೇಂದ್ರವನ್ನು ಒತ್ತಾಯಿಸುತ್ತೇವೆ ಎಂದು ಹೇಳಿದರು.