ಗುರು ಪೂರ್ಣಿಮೆ. ನಾಲ್ಕಕ್ಷರ
ಕಳಿಸಿದ ಗುರುವಿಗೆ ನಮನ ಸಲ್ಲಿಸುವ ದಿನ.ಹಲವಾರು ಕ್ಷೇತ್ರಗಳಲ್ಲಿ ಗುರುವಿಗೆ ತನ್ನದೇ ಆದ ಸ್ಥಾನವಿದೆ.ಗುರುವಿಲ್ಲದೇ ಕಲಿತವರು ಅತ್ಯಂತ ವಿರಳ.ಈ ಮಾತಿಗೆ
ಪತ್ರಿಕಾ ರಂಗವೂ ಹೊರತಾಗಿಲ್ಲ.
ಎಪ್ಪತ್ತು,ಎಂಭತ್ತನೇ ದಶಕಗಳಲ್ಲಿ
ನಾನು ಕಂಡಂತೆ ರಾಜ್ಯ ಪತ್ರಿಕಾ ರಂಗದಲ್ಲಿ ಗುರು ಶಿಷ್ಯರ ಪರಂಪರೆ ರಾರಾಜಿಸುತ್ತಿತ್ತು.ತಿದ್ದಿ,ತೀಡಿ ಕಲಿಸುವ ಗುರುಗಳು ಇದ್ದಂತೆ ಶಿರಸಾ ವಹಿಸಿ ನಿಷ್ಠೆಯಿಂದ ,ವಿಧೇಯರಾಗಿ ಕಲಿಯುವ ಶಿಷ್ಯ ಗಣವೂ ಇತ್ತು.ರಾಜ್ಯ ಮಟ್ಟದಲ್ಲೂ ಈ ಸಂಪ್ರದಾಯವಿತ್ತು. ಬೆಳಗಾವಿಯ ಮಟ್ಟದಲ್ಲೂ ಇತ್ತು.ರಾಜ್ಯ ಮಟ್ಟದಲ್ಲಿ
ಪ್ರಾತಃಸ್ಮರಣೀಯರಾದ ದಿ.ಪಾಟೀಲ ಪುಟ್ಟಪ್ಪ, ದಿ.ಖಾದ್ರಿ ಶಾಮಣ್ಣ ಇತರರು
" ಖಡಕ್ ಗುರುಗಳ" ಸ್ಥಾನದಲ್ಲಿದ್ದರೆ ರಾಜ್ಯಾದ್ಯಂತ ಅವರ ಶಿಷ್ಯ ಬಳಗವೇ ಬಳ್ಳಿಯಂತೆ ಹಬ್ಬಿತ್ತು.
ನಾನು ರಾಮದುರ್ಗದಿಂದ ಬೆಳಗಾವಿಯ ಪತ್ರಿಕೋದ್ಯಮ ಪ್ರವೇಶಿಸಿ ಕಳೆದ ಜೂನ್ 27 ಕ್ಕೆ 40 ವರ್ಷ.1980 ರ ಜೂನ್ 27 ಕ್ಕೆ ಬೆಳಗಾವಿಯ " ಕನ್ನಡಮ್ಮ" ದಲ್ಲಿ 11 ತಿಂಗಳು ಕೆಲಸ ಮಾಡಿ 1981 ರ ಮೇ 15 ರಂದು " ನಾಡೋಜ" ದಿನಪತ್ರಿಕೆ ಸೇರಿದಾಗ ನನಗೆ ಮೊಟ್ಟ ಮೊದಲು "ಗುರು ಸಂಪ್ರದಾಯ" ದ ದರ್ಶನವಾಯಿತು.ಬರೆಯುವದು,ಕಲಿಯುವದು
ಎಷ್ಟೊಂದಿದೆ ಎಂಬುದರ ಅರಿವಾದದ್ದು.ಇನ್ನೂ ಕಲಿಯುವ ವಿದ್ಯಾರ್ಥಿಯೆಂದೇ ನಾನು ತಿಳಿದಿದ್ದೇನೆ.
ಬೆಳಗಾವಿಯ ಕನ್ನಡ, ಮರಾಠಿ ಪತ್ರಕರ್ತರಿಗೆಲ್ಲ ಅಂದಿನ " ಮಹಾಗುರು"
ಎಂದರೆ ಹಿರಿಯ ಪತ್ರಕರ್ತ,ಸ್ವಾತಂತ್ರ್ಯಯೋಧ ದಿ.ಆರ್.ಎಚ್.ಕುಲಕರ್ಣಿ.
ನನಗೆ ಮಾತ್ರ ಅವರ " ನೇರ ಶಿಷ್ಯತ್ವ" ಸಿಕ್ಕಿರಲಿಲ್ಲ.ನನಗೆ ರಾಘವೇಂದ್ರ ಜೋಶಿ ಮತ್ತು ಡೆಕ್ಕನ್ ಹೆರಾಲ್ಡ್
ಪ್ರಜಾವಾಣಿ ಪತ್ರಿಕೆಗಳ ವರದಿಗಾರ ದಿ.ಎನ್.ಜಿ.ಪಾಟೀಲರೇ ಗುರುಗಳು.
ನಾಡೋಜ ಸೇರಿದಾಗ ನನಗೆ 21 ವರ್ಷ.ರಾಮದುರ್ಗ ಕಾಲೇಜನ್ನು ಅರ್ಧಕ್ಕೇ ಬಿಟ್ಟು ಬಂದವ ಬೇರೆ. ಇಲ್ಲಿಯೇ ಕಲಿಯಬೇಕು. ನಾಡೋಜದ ಸಂಪಾದಕರು ಜೋಶಿಯವರಾದರೂ " ಎನ್.ಜಿ." ಅವರ " ಹಸ್ತಕ್ಷೇಪ" ಸಾಕಷ್ಟಿತ್ತು! ಗಡಿವಿವಾದ,ಎಮ್.ಇ.ಎಸ್.ವಿರುದ್ಧ " ತಂತ್ರ' ಹೆಣೆಯುವದರಲ್ಲಿ ರಾಘವೇಂದ್ರ ಜೋಶಿ ಮತ್ತು " ಎನ್.ಜಿ." ಪಾತ್ರ ನಿಸ್ಸೀಮರಾಗಿದ್ದರು.
ಎನ್.ಜಿ.ಪಾಟೀಲರ ಕಡೆಯಿಂದ " ಡಿಕ್ಟೇಶನ್" ತೆಗೆದುಕೊಳ್ಳುವದೆಂದರೆ ನನಗೆ ಸಮಾಧಾನ ಮತ್ತು " ಅಸಮಾಧಾನ" ಎರಡೂ ಇರುತ್ತಿತ್ತು.ಅವರು ಬರೆಸುವದರಲ್ಲಿ ಕಲಿಯುವುದು ಬಹಳಷ್ಟಿತ್ತು.ಆದರೆ ಒಂದು ಶೀಟಿನಲ್ಲಿ ಬರೆದುಕೊಂಡಿದ್ದನ್ನೆಲ್ಲ ಮತ್ತೆ ಮತ್ತೆ ಹರಿಸಿ ಹಾಕಿಸಿ ಮತ್ತೊಮ್ಮೆ ಡಿಕ್ಟೇಶನ್ ಕೊಟ್ಟಾಗ ನಾನೂ ತಾಳ್ಮೆ ಕಳೆದುಕೊಳ್ಳುತ್ತಿದ್ದೆ! ಆದರೂ ಗುರುವಿನ ಮುಂದೆ ಮೆತ್ತಗೇ ಇರುತ್ತಿದ್ದೆ!
ರಾಘವೇಂದ್ರ ಜೋಶಿಯವರಿಂದ
ಕಲಿತಿದ್ದು ಸಾಗರದಷ್ಟು.
ಯು ಎನ್ ಐ ಸುದ್ದಿ ಸಂಸ್ಥೆಯ ಇಂಗ್ಲೀಷ್ ಸುದ್ದಿಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಕಲಿತದ್ದೇ ನಾಡೋಜದಲ್ಲಿ. ನಾಡೋಜ ಸೇರಿ ಎರಡು ಮೂರು ವರ್ಷಗಳಿಗೆ ಆಫೀಸಿನಲ್ಲಿದ್ದ ಬೃಹತ್ ಇಂಗ್ಲೀಷ ಕನ್ನಡ ಡಿಕ್ಶನರಿಯನ್ನೇ ಕಸಿದುಕೊಂಡು ನಾಗೊಂದಿಯ ಮೇಲಿಟ್ಟರು ಸಂಪಾದಕರು. ಅಕ್ಷರಶಃ ಭಾಷಾಂತರ ಮಾಡಬಾರದು. ಭಾವಾಂತರ ಮಾಡಬೇಕು ಎಂದು ತಿದ್ದಿ ತೀಡಿ ಹೇಳುತ್ತಿದ್ದರು.
ಸಂಪಾದಕರು ಊರಲ್ಲಿಲ್ಲದಾಗ ಎನ್.ಜಿ.ಪಾಟೀಲರೇ " ಮಹಾ ಸಂಪಾದಕರು"! ರಾತ್ರಿ ಬಂದು ಮಧ್ಯ ರಾತ್ರಿ 1 ಗಂಟೆಯವರೆಗೆ ಕುಳಿತು ಮುಖಪುಟದ ಪ್ರಮುಖ ಸುದ್ದಿಗಳನ್ನು ಫೈನಲ್ ಮಾಡಿಯೇ ಖಡೇಬಜಾರದಿಂದ ತಮ್ಮ ಗೋಂಧಳಿ ಗಲ್ಲಿಯ ಮನೆಗೆ ಮರಳುತ್ತಿದ್ದರು.
ಒಮ್ಮೊಮ್ಮೆ " ಮಹಾ ಸಂಪಾದಕರು" ನನ್ನಿಂದ ಮಾಡಿಸಿದ ಎಡವಟ್ಟುಗಳಿಂದಾಗಿ ನಾನು ಸಂಪಾದಕರಿಂದ " ಫೈರ್" ಮಾಡಿಸಿಕೊಂಡ ಪ್ರಸಂಗಗಳಿಗೆ ಕೊರತೆಯೇನಿಲ್ಲ.
ಎನ್.ಜಿ.ಪಾಟೀಲರು ಹಾಗೂ ರಾಘವೇಂದ್ರ ಜೋಶಿಯವರು ಪತ್ರಿಕಾ ಪರಿಷತ್ತಿಗೆ ಬಂದರೆ ನನ್ನಂಥ ಇತರ ಕಿರಿಯರ ವರ್ತನೆ ಹೇಗಿರುತ್ತಿತ್ತೆಂದರೆ ಮುಂದಿನ ಸಾಲಿನಲ್ಲಿ ಕುಳಿತವರು ಬ್ಯಾಕ್ ಬೆಂಚರ್ಸ್ ಆಗುತ್ತಿದ್ದರು! ಈ ಇಬ್ವರು ಸಹಿತ ಬೆಳಗಾವಿಯ ಅನೇಕ ಪತ್ರಕರ್ತರಿಗೆ
ಗುರುವಿನ ಸ್ಥಾನದಲ್ಲಿದ್ದವರೆಂದರೆ ," ಆರ್.ಎಚ್" ಎಂದೇ ಖ್ಯಾತರಾಗಿದ್ದ ದಿ.ಆರ್.ಎಚ್.ಕುಲಕರ್ಣಿ.
ಕಿರ್ಲೋಸ್ಕರ ರಸ್ತೆಯ ಕಾವೇರಿ ಕೋಲ್ಡ್ರಿಂಕ್ ಎದುರಿಗೆ ಚಿಕ್ಕ ಆಫೀಸಿನಲ್ಲಿ ಕೂಡುತ್ತಿದ್ದ ಅವರು ಎರಡೇ ಬೆರಳುಗಳಿಂದ ಹಳೆಯ ಟೈಪ್ ರೈಟರ್ ನಲ್ಲಿ ಸುದ್ದಿಯನ್ನು ಟೈಪ್ ಮಾಡುತ್ತಿದ್ದರು. ಸಂಜೆ ಅವರ ಬಳಿ ಪತ್ರಕರ್ತರು ಸೇರುತ್ತಿದ್ದರು.ಅವರು ಟೈಪ್ ಮಾಡಿದ ಸುದ್ದಿಯ ಕಾರ್ಬನ್ ಕಾಪಿಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ಆರ್.ಎಚ್.ರನ್ನು ಸಿಟ್ಟಿಗೆಬ್ಬಿಸಿ ಗೋಳು ಹೊಯ್ದುಕೊಳ್ಳುವದೆಂದರೆ ಎನ್.ಜಿ.ಗೆ ಎಲ್ಲಿಲ್ಲದ ಖುಷಿ.ಅಲ್ಲಿಗೆ ಬರುತ್ತಿದ್ದ ಆಕಾಶವಾಣಿಯ ವರದಿಗಾರ ಎಮ್.ವ್ಹಿ.ನಾಗರಾಜ ಅವರನ್ನು ಪೀಡಿಸುವದೆಂದರೂ ಎನ್.ಜಿ.ಗೆ ಅತಿಯಾದ ಸಂತೋಷ. ನಾಗರಾಜರನ್ನು ಕಾಡುವದಕ್ಕೆ ಎನ್.ಜಿ.ಗೆ ಹೊತ್ತು,ಗೊತ್ತು ಇರಲಿಲ್ಲ.ಒಮ್ಮೆ ಮಧ್ಯ ರಾತ್ರಿ ಒಂದು ಗಂಟೆಗೆ ನಾಡೋಜದ ಸ್ಥಿರ ದೂರವಾಣಿಯಿಂದ ನನ್ನಿಂದ ಫೋನ್ ಮಾಡಿಸಿದ ಎನ್.ಜಿ. ನಾಯಿ ಒದರುವಂತೆ " ಒವ್ ಒವ್" ಎಂದು ಒದರಿಸಿದ್ದರು! ಮಾರನೇ ದಿನ ಇದು ಗೊತ್ತಾದ ನಾಗರಾಜ ಸಂಪಾದಕರ ಹಾಗೂ ಆರ್.ಎಚ್.ಮುಂದೆ ದೊಡ್ಡ ಕಂಪ್ಲೇಂಟ್ ಮಾಡಿದ್ದರು.ಕ್ಷಮೆ ಕೇಳುವ ಸರದಿ ನನ್ನದಾಗಿತ್ತು!
ಎನ್.ಜಿ.ಯವರಾಗಲಿ, ರಾಘವೇಂದ್ರ ಜೋಶಿಯವರಾಗಲಿ ಗಂಭೀರ ಅಥವಾ ಗಡಿವಿಷಯದಲ್ಲಾಗಲಿ ಮೊದಲು ಚರ್ಚಿಸುತ್ತಿದ್ದುದು ಆರ್.ಎಚ್.ಜೊತೆಗೇನೆ.ನ್ಯಾಯವಾದಿಯೂ ಆಗಿದ್ದ ಆರ್.ಎಚ್.ಆಗ ಇಂಡಿಯನ್ ಎಕ್ಸಪ್ರೆಸ್ ವರದಿಗಾರರೂ ಆಗಿದ್ದರು. ಬ್ರಹ್ಮಚಾರಿಯಾಗಿದ್ದ ಅವರನ್ನು ಕನ್ನಡ ಮತ್ತು ಮರಾಠಿ ಪತ್ರಕರ್ತರೆಲ್ಲರೂ ಗೌರವಿಸುತ್ತಿದ್ದರು.
ದಿ.ಖಾದ್ರಿ ಶಾಮಣ್ಣ ಮತ್ತು ದಿ.ಪಾಟೀಲ ಪುಟ್ಟಪ್ಪ ಅವರ ಕೈಕೆಳಗೆ ನಾನು ಕೆಲಸ ಮಾಡಿಲ್ಲವಾದರೂ ಅವರಿಬ್ಬರ ಬರವಣಿಗೆಯ ಪ್ರಭಾವ ನನ್ನ ಬರಹದ ಮೇಲೆ ಸಾಕಷ್ಟಿದೆ.ಕ್ರಿಯಾ ಪದಗಳೇ ಇಲ್ಲದ ಬರಹಗಳು ಖಾದ್ರಿಯವರ ವೈಶಿಷ್ಟ್ಯ.ಗಾದೆ ಮಾತು, ಆಳವಾದ ಅಧ್ಯಯನ, ಅಂಕಿಸಂಖ್ಯೆಗಳು ಸಹಿತ ಬರವಣಿಗೆಗಳು ಪಾಪು ಅವರ ವಿಶೇಷತೆ.ಈ ಇಬ್ಬರೂ ರಾಜ್ಯದಲ್ಲಿ ನೂರಾರು ಪತ್ರಕರ್ತರನ್ನು ಬೆಳೆಸಿದ್ದಾರೆ.ಇಬ್ಬರೂ ನನಗೂ ಪರೋಕ್ಷವಾಗಿ ಗುರುಗಳ ಸಮಾನರೇ.
ಆ ದಿನಗಳು ಈಗಲೂ ಮುಂದುವರೆಯಬೇಕೆಂದು ಹೇಳುವಷ್ಟು ನಾನು ಮೂರ್ಖನಲ್ಲ.ಬಯಸುವದೂ ಇಲ್ಲ.ಇಂದು ಎನ್.ಜಿ.ಪಾಟೀಲರು ತಮ್ಮ 67 ನೇ ವಯಸ್ಸಿನಲ್ಲಿ 2005 ರ ಜನೇವರಿ 6 ರಂದು ಕೊನೆಯುಸಿರೆಳೆದರು.ಅವರ ಪುತ್ರ ಗಿರೀಶ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದಾನೆ.ಅವನಿಂದ ಎನ್.ಜಿ.ಅವರ ಫೋಟೊ ತರಿಸಿಕೊಂಡೆ.ರಾಘವೇಂದ್ರ ಜೋಶಿಯವರಿಗೆ ಫೋನ್ ಮಾಡುವದು,ಭೆಟ್ಟಿಯಾಗುವುದು ,
ಆರೋಗ್ಯ ವಿಚಾರಿಸುವುದು ನನ್ನ ನಿರಂತರ ಕ್ರಿಯೆ.ರಾಘವೇಂದ್ರ ಜೋಶಿಯವರೂ
2020 ರ ಡಿಸೆಂಬರ್ ನಲ್ಲಿ
ಕೊನೆಯುಸಿರೆಳೆದರು.ಅದೇ ತಿಂಗಳು
8 ರಂದು ಅವರ ಜನ್ಮದಿನ. ಫೋನ್ ಮಾಡಿ ಶುಭಾಶಯ ತಿಳಿಸಿದ್ದೆ. ಅವರೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದೆ.
ಸದ್ಯ ಬೆಳಗಾವಿಯ ಕೆಲವು ಪತ್ರಕರ್ತರು ವ್ಯಾಟ್ಸಪ್ ಗ್ರುಪ್ ಗಳಲ್ಲಿ ಪರಸ್ಪರರು
" ಅಣ್ಣಾ" ಎಂದು ಸಂಬೋಧನೆ ಮಾಡುವ ರೀತಿ ರಿಯಾಜು ಇಟ್ಟುಕೊಂಡಿದ್ದು ಸಮಾಧಾನಕಾರ. ಒಂದಿಬ್ಬರು ನನ್ನನ್ನು ಗುರುವಿನ ಸ್ಥಾನದಲ್ಲಿ ನೋಡಿ ಸಂದೇಶ ಕಳಿಸಿದ್ದಾರೆ.
ನನಗೆ ಪತ್ರಿಕೋದ್ಯಮದಲ್ಲಿ ನಾಲ್ಕಕ್ಷರ ಕಲಿಸಿದ ಗುರುಗಳಿಗೆ ಬಹಿರಂಗ ನಮನ.
✒️ಅಶೋಕ ಚಂದರಗಿ,ಬೆಳಗಾವಿ
9620114466,9448114466